ಪಾಟ್ನಾ: ಸರ್ಕಾರ ರಚಿಸಲು ಆಹ್ವಾನ ನೀಡುವಂತೆ ಬಿಹಾರದ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಮೇಲೆ ಒತ್ತಡ ಹೇರಲು, ಜನತಾದಳ (ಸಂಯುಕ್ತ) ಅಧ್ಯಕ್ಷ ನಿತೀಶ್ ಕುಮಾರ್ ತಮ್ಮ ಬೆಂಬಲಿಗ ಶಾಸಕರೊಂದಿಗೆ ಬುಧವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ದೂರು ನೀಡಿ ರಾಷ್ಟ್ರಪತಿ ಭವನದ ಮುಂದೆ ಪೆರೇಡ್ ನಡೆಸಲಿದ್ದಾರೆ.
ತಾವು ಸರ್ಕಾರ ರಚನೆಗೆ ಬೇಡಿಕೆಯಿಟ್ಟು ೨೪ ಘಂಟೆಗಳು ಕಳೆದರೂ ರಾಜ್ಯಪಾಲರು ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಹೋದದ್ದಕ್ಕೆ ಅಸಮಧಾನಗೊಂದಿರುವ ನಿತೀಶ್ ತಮ್ಮ ೧೩೦ ಬೆಂಬಲಿಗ ಶಾಸಕರೊಂದಿಗೆ ಮಂಗಳವಾರ ಸಂಜೆ ದೆಹಲಿಗೆ ವಿಮಾನ ಹತ್ತಿದ್ದಾರೆ. ಕುದುರೆ ಮಾರಾಟ ನಡೆಯಬಹುದೆಂದು ಆತಂಕ ವ್ಯಕ್ತಪಡಿಸಿರುವ ನಿತೀಶ್ "ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರನ್ನು ಭೇಟಿ ಮಾಡಿದ ನಂತರ ಮಾಂಝಿ ಅವರಿಗೆ ಕುದುರೆ ಮಾರಾಟಕ್ಕೆ ಹಸಿರು ನಿಶಾನೆ ಸಿಕ್ಕಿರುವ ಹಾಗೆ ಕಾಣುತ್ತದೆ" ಎಂದಿದ್ದಾರೆ.
"ನಾನು ೧೩೦ ಶಾಸಕರ ಬೆಂಬಲದ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸ್ಸಿದ್ದರೂ ಸಹ ಸರ್ಕಾರ ರಚನೆಗೆ ಆಹ್ವಾನ ನೀಡುವುದಕ್ಕೆ ತಡ ಮಾಡುವುದಕ್ಕೆ ಯಾವುದೇ ಕಾರಣಗಳಿಲ್ಲ" ಎಂದು ದೂರಿದ್ದಾರೆ ನಿತೀಶ್.