ಸೂರತ್: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತಕ್ಕೆ ಬಂದಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ ಬಂಗಾರದ ಎಳೆಯಲ್ಲಿ ‘ನರೇಂದ್ರ ದಾಮೋದರ ದಾಸ್ ಮೋದಿ’ ಎಂದು ಕಸೂತಿ ಹಾಕಿದ ಅಂದಾಜು 10 ಲಕ್ಷ ಬೆಲೆಬಾಳುವ ವಿವಾದಿತ ನೀಲಿ ಬಣ್ಣದ ಬಂಧ್ ಗಲಾ ಸೂಟ್ ಗೆ ಬುಧವಾರ ಹರಾಜಿನಲ್ಲಿ ರು.೧.೨೧ ಕೋಟಿ ಬಿಡ್ ಮಾಡಲಾಗಿದೆ.
ಸೂರತ್ ನ ರಾಜೇಶ್ ಜುನೇಜಾ ಎಂಬವರು ಮೋದಿ ಸೂಟ್ಗೆ ರು. 1.21 ಕೋಟಿ ಬಿಡ್ ಮಾಡಿದ್ದಾರೆ. ಮೊದಲ ದಿನದ ಹರಾಜಿನಲ್ಲಿ ಅತೀ ಹೆಚ್ಚು ಬಿಡ್ ಮಾಡಿದ ಜುನೇಜಾ, ತಾನು ಮೋದಿಯವರ ಆತ್ಮವಿಶ್ವಾಸ, ಕಠಿಣ ಪರಿಶ್ರಮವನ್ನು ಮೆಚ್ಚುತ್ತೇನೆ. ಅವರೇ ನನ್ನ ರೋಲ್ ಮಾಡೆಲ್. ನಾನು ಈ ಸೂಟ್ ನ್ನು ಅಮೂಲ್ಯ ವಸ್ತುವೆಂದು ಪರಿಗಣಿಸಿ ಕಾಪಾಡಲಿದ್ದೇನೆ. ಇನ್ನೂ ಬಿಡ್ ಸ್ವಲ್ಪ ಜಾಸ್ತಿಯಾದರೆ ಅದನ್ನೂ ನಿಭಾಯಿಸುವೆ. ಇದಕ್ಕಿಂತ ಹೆಚ್ಚು ಜಾಸ್ತಿಯಾದರೆ ಆವಾಗ ನಾನು ಮುಂದುವರಿಯಬೇಕೋ ಬೇಡವೋ ಎಂದು ಯೋಚನೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ಈ ಹರಾಜು ಪ್ರಕ್ರಿಯೆಯನ್ನು ಬುಧವಾರದಿಂದ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಮೊದಲ ದಿನವೇ ನಿರೀಕ್ಷೆಗಿಂತ ಹೆಚ್ಚಿನ ಮೊತ್ತಕ್ಕೆ ಸೂಟ್ ಬಿಡ್ ಮಾಡಲಾಗಿದೆ .
ಪ್ರಾರಂಭದಲ್ಲಿ ರಾಜು ಅಗರ್‌ವಾಲ್ ಎಂಬ ಉದ್ಯಮಿ ರು. 51 ಲಕ್ಷಕ್ಕೆ, ನಂತರ ಸುರೇಶ್ ಅಗರ್‌ವಾಲ್ ಎಂಬ ಉದ್ಯಮಿ ರು. 1 ಕೋಟಿಗೆ ಹರಾಜು ಕೂಗಿದರು. ಇದಾದ ನಂತರ ಗುಜರಾತ್ ಮೂಲದ ವಿರಾಲ್ ಚೌಕ್ಷಿ ಎಂಬ ಅನಿವಾಸಿ ಭಾರತೀಯರೊಬ್ಬರು ರು. 1.11 ಕೋಟಿ ಹರಾಜು ಕೂಗಿದರು.
ಇದರ ಜತೆಗೆ ಮೋದಿ ಅವರಿಗೆ ಉಡುಗೊರೆಯಾಗಿ ಲಭಿಸಿದ 455 ಸರಕುಗಳನ್ನೂ ಹರಾಜು ಮಾಡಲಾಗಿದೆ. ಹರಾಜಿನಿಂದ ಬಂದ ಹಣವನ್ನು ಮೋದಿ ಗಂಗಾ ನದಿ ಶುದ್ಧೀಕರಣ ಯೋಜನೆಗೆ ಬಳಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.