ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸಂಕವನ್ನು ಗುರುವಾರ ಮತ್ತೆ ಹೆಚ್ಚಳ ಮಾಡಿದೆ. ಆದರೆ ಈ ಅಬಕಾರಿ ಸುಂಕ ಹೆಚ್ಚಳ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 2 ರು. ಹೆಚ್ಚಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಸತತ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಆದಾಯ ಸಂಗ್ರಹದ ಗುರಿಯನ್ನು ಹೆಚ್ಚಿಸಿಕೊಳ್ಳಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಆದರೆ, ಈ ಸುಂಕ ಹೆಚ್ಚಳದ ಬಿಸಿ ಗ್ರಾಹಕರ ಮೇಲೆ ಬೀಳುವುದಿಲ್ಲ ಎನ್ನುವುದೇ ಖುಷಿ.
ಈ ಹೊಸ ಸುಂಕ ಪರಿಷ್ಕರಣೆ ಗುರುವಾರ ಮಧ್ಯರಾತ್ರಿಯಿಂದಲೇ ಅನುಷ್ಠಾನಕ್ಕೆ ಬಂದಿದೆ. ಡಿಸೆಂಬರ್ ೩ ರಂದು ಪೆಟ್ರೋಲ್ ರು.2.25 ಮತ್ತು ಡೀಸೆಲ್ ಅಬಕಾರಿ ಸುಂಕವನ್ನು ರು. 1ರಷ್ಟು ಹೆಚ್ಚಿಸಿತ್ತು. ಅಲ್ಲದೆ ನ.12 ರಂದು ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ರು.1.50 ರಷ್ಟು ಹೆಚ್ಚಿಸಿತ್ತು. ಇದೀಗ ಸುಂಕ ಹೆಚ್ಚಿಸುತ್ತಿರುವುದು ಇದು ಮೂರನೇ ಬಾರಿ.
ಅಬಕಾರಿ ಸುಂಕ ಪರಿಷ್ಕರಣೆಯಿಂದ ಈ ಹಣಕಾಸು ವರ್ಷದಲ್ಲಿ ಹೆಚ್ಚುವರಿ ರು.6 ಸಾವಿರ ಕೋಟಿ ಆದಾಯ ಸಂಗ್ರಹವಾಗಲಿದೆ. ಈ ಹಿಂದಿನ ಸುಂಕ ಹೆಚ್ಚಳ ನಿರ್ಧಾರದಿಂದ ಸರ್ಕಾರ ರು.6 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆ ಇದೆ. ಈ ಮೂಲಕ ವಿತ್ತೀಯ ಕೊರತೆಯ ಸಮಸ್ಯೆಯಿಂದ ಕಂಗೆಟ್ಟಿರುವ ಸರ್ಕಾರಕ್ಕೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ.