ಲಾಹೋರ್: ಉಗ್ರರ ಬೆದರಿಕೆಯ ಭಯದಿಂದಾಗಿ ಕಳೆದ 16 ವರ್ಷಗಳಿಂದ ದೆಹಲಿ ಮತ್ತು ಲಾಹೋರ್ ನಡುವೆ ಸಂಚಾರ ನಡೆಸುತ್ತಿರುವ 'ದೋಸ್ತಿ' ಬಸ್ ಸಂಚಾರಕ್ಕೆ ನಿರ್ಬಂಧ ಹೇರಲು ಪಾಕ್ ತೀರ್ಮಾನಿಸಿದೆ.
ಇನ್ಮುಂದೆ 'ದೋಸ್ತಿ' ಬಸ್ ಭಾರತ ಮತ್ತು ಪಾಕಿಸ್ತಾನದ ಗಡಿಪ್ರದೇಶವಾದ ವಾಘಾ ಗಡಿಯವರೆಗೆ ಮಾತ್ರ ಸಂಚರಿಸುವುದು. ಅಲ್ಲಿಂದ ಇನ್ನೊಂದು ಬಸ್ ಮೂಲಕ 21 ಕಿ.ಮೀ ಸಂಚರಿಸಿ ಲಾಹೋರ್ ಸೇರುವಂತೆ ಪ್ರಯಾಣಿಕರಿಗೆ ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪಾಕಿಸ್ತಾನ ಟೂರಿಸಂ ಡೆವಲಪ್‌ಮೆಂಟ್ ಕಾರ್ಪರೇಷನ್ (ಪಿಟಿಡಿಸಿ) ಹೇಳಿದೆ.
ಪಿಟಿಡಿಸಿ ಇದೀಗ ತಮ್ಮೆಲ್ಲಾ ಬಸ್ ಸಂಚಾರ ವ್ಯವಸ್ಥೆಯನ್ನು ವಾಘಾದಲ್ಲಿರುವ ಉಪ ಕಚೇರಿಗೆ ವರ್ಗಾಯಿಸಿದೆ. ನವದೆಹಲಿ ಮತ್ತು ಅಮೃತಸರಕ್ಕೆ ಹೋಗುವ ಪ್ರಯಾಣಿಕರು ಇನ್ಮುಂದೆ ವಾಘಾದಲ್ಲಿ ಬಸ್ ಏರಬೇಕಾಗಿದೆ. ಅದೇ ವೇಳೆ ಅಲ್ಲಿಂದ ಈ ಕಡೆ ಬರುವವರು ಕೂಡಾ ವಾಘಾದಲ್ಲಿಳಿದು ಬೇರೆ ಬಸ್ಸೇರಬೇಕಾಗಿದೆ ಎಂದು ಪಿಟಿಡಿಸಿ ಅಧಿಕೃತರು ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಹೆಚ್ಚಾಗಿರುವುದರಿಂದ ಸುರಕ್ಷೆಯ ನಿಟ್ಟಿನಲ್ಲಿ ಈ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪಿಟಿಡಿಸಿ ಅಧಿಕೃತರು ಹೇಳಿದ್ದಾರೆ.