ನವದೆಹಲಿ: ನಾನು ನನ್ನ ಕನಸನ್ನು ನನಸಾಗಿಸಲು ಬಂದಾಗ ಮುಂಬೈನ ಹೋಟೆಲೊಂದರಲ್ಲಿ ಪಾತ್ರೆ ತೊಳೆದಿದ್ದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
15 ವರ್ಷಗಳ ಹಿಂದೆ ನಾನು ಮುಂಬೈಯ ಹೋಟೆಲ್‌ನಲ್ಲಿ ಪಾತ್ರೆ ತೊಳೆದಿದ್ದೆ. ಒಬ್ಬ ಸಚಿವೆಯಾಗಿ ನಾನೀಗ ಇದನ್ನು ನೆನಪಿಸಿಕೊಂಡು ಹೆಮ್ಮೆ ಪಡುತ್ತೇನೆ. ಈ ಬಗ್ಗೆ ನನಗೆ ಯಾವುದೇ ನಾಚಿಕೆಯಿಲ್ಲ. ಎಲ್ಲ ರೀತಿಯ ಶ್ರಮ ದುಡಿಮೆಗಳನ್ನು ಗೌರವಿಸುವ ಸಂಸ್ಕೃತಿ ನಮ್ಮದು. ಇದು ಆಕಾಂಕ್ಷೆಗಳನ್ನು ಗೌರವಿಸುವ ದೇಶ. ಆದ್ದರಿಂದ ಯಾರೂ ತಮ್ಮ ಪೂರ್ವ ಕೆಲಸದ ಬಗ್ಗೆ ಕೀಳರಿಮೆ ಹೊಂದುವ ಅಗತ್ಯವಿಲ್ಲ ಎಂದು ಸಚಿವೆ ಹೇಳಿದ್ದಾರೆ.
ರಾಜ್ಯ ಶಿಕ್ಷಣ ಸಚಿವರುಗಳ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು ಮೇಕ್ ಇನ್ ಇಂಡಿಯಾ ಯೋಜನೆಯನ್ನು ಉಲ್ಲೇಖಿಸುತ್ತಾ, ಕೌಶಲ್ಯ ಭರಿತ ಭಾರತವನ್ನು ಉದ್ಯಮ ಬಯಸುತ್ತದೆ ಎಂದಿದ್ದಾರೆ.
ಕೌಶಲ್ಯ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಎಷ್ಟು ಮಹತ್ವ ನೀಡುತ್ತಿದ್ದಾರೆ ಎಂಬುದನ್ನು ವಿವರಿಸಿದ ಸಚಿವೆ, ಒಬ್ಬ ಪ್ಲಂಬರ್ ಅಥವಾ ಮೆಕ್ಯಾನಿಕ್ ಆಗಿರುವುದಕ್ಕೆ ಯಾರೂ ಕೀಳರಿಮೆ ಹೊಂದಬೇಕಿಲ್ಲ. ಇಲ್ಲಿ ಶ್ರಮದ ಗೌರವ ಅತ್ಯಂತ ಮಹತ್ವದ್ದಾಗುತ್ತದೆ. ಸಮಾಜವು ಎಲ್ಲ ಶ್ರಮಗಳನ್ನು ಗೌರವಿಸಲು ತೊಡಗಿದಾಗ ಶ್ರಮಕ್ಕೆ ಘನತೆ ತಾನಾಗಿಯೇ ಬರುತ್ತದೆ ಎಂದು ಹೇಳಿದ್ದಾರೆ.