ಮುಂಬೈ: ಮಾಜಿ ಕ್ರಿಕೆಟರ್ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸಿನಿಮಾ ಪ್ರವೇಶ ಮಾಡುತ್ತಿದ್ದಾರೆ!. ಮುಂಬೈ ಮೂಲದ ಸಿನಿಮಾ ನಿರ್ಮಾಣ ಸಂಸ್ಥೆ 200 ನಾಟ್‌ಔಟ್ ಸಚಿನ್ ಜೀವನಕತೆಯನ್ನಾಧರಿಸಿ ಸಿನಿಮಾ ನಿರ್ಮಾಣ ಮಾಡಲು ಹೊರಟಿದೆ. ಪ್ರಸ್ತುತ ಸಿನಿಮಾದಲ್ಲಿ ನಾಯಕ ನಟನಾಗಿ ಸ್ವತಃ ಸಚಿನ್ ಬಣ್ಣ ಹಚ್ಚಲಿದ್ದಾರೆ ಎಂಬುದು ಸಿನಿಮಾದ ಹೈಲೈಟ್.
ಸದ್ಯ ಸಿನಿಮಾಗೆ ಹೆಸರಿಟ್ಟಿಲ್ಲ. ಈ ಚಿತ್ರದಲ್ಲಿ ಸಚಿನ್ ಅವರ ಜೀವನದ ಏರಿಳಿತಗಳು, ಬಾಲ್ಯ, ಕ್ರಿಕೆಟ್ ಜೀವನ, ಡಾ. ಅಂಜಲಿಯೊಂದಿಗಿನ ಬದುಕು, ಸಾಧನೆ ಎಲ್ಲವನ್ನೂ ಬೆಳ್ಳಿತೆರೆಯ ಮೇಲೆ ತೋರಿಸಲಾಗುತ್ತದೆ.
ಸಿನಿಮಾ ನಿರ್ಮಾಣಕ್ಕಾಗಿ ಸಚಿನ್ ತೆಂಡೂಲ್ಕರ್ ಅವರ ಬ್ರ್ಯಾಂಡ್ ಮತ್ತು ವಾಣಿಜ್ಯ ಆಸಕ್ತಿಗಳ ಜವಾಬ್ದಾರಿ ನಿಭಾಯಿಸುತ್ತಿರುವ ವಲ್ಡ್ ಸ್ಫೋರ್ಟ್ಸ್ ಗ್ರೂಪ್ (ಡಬ್ಲ್ಯುಎಸ್‌ಜಿ) ಯಿಂದ 200 ನಾಟ್ ಔಟ್ ಸಂಸ್ಥೆ ಹಕ್ಕುಗಳನ್ನು ಖರೀದಿಸಿದೆ ಎಂದು ಹೇಳಲಾಗುತ್ತಿದೆ. ಅದೇ ವೇಳೆ ಪ್ರಶಸ್ತಿ ಪುರಸ್ಕೃತ ಲಂಡನ್ ಮೂಲದ ಲೇಖಕ ಹಾಗು ಸಿನಿಮಾ ನಿರ್ಮಾಪಕ ಜೇಮ್ಸ್ ಎರ್‌ಸ್ಕಿನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿಯಿದೆ.
ಈ ಚಿತ್ರಕ್ಕಾಗಿ ಪ್ರಖ್ಯಾತ ವ್ಯಕ್ತಿಗಳು ಸಹಾಯ ನೀಡಿದ್ದು, ಜಗತ್ತಿನ ಎಲ್ಲ ಕ್ರಿಕೆಟ್ ಮಂಡಳಿಗಳ ಸಹಾಯದಿಂದ ಸಚಿನ್ ವೃತ್ತಿ ಜೀವನದ ವಿಷಯಗಳನ್ನು ಕಲೆ ಹಾಕುವಲ್ಲಿ ನಿರ್ಮಾಣ ಸಂಸ್ಥೆ ಬ್ಯುಸಿಯಾಗಿದೆ.
ಸಚಿನ್ ತೆಂಡೂಲ್ಕರ್ ಜೀವನಾಧಾರಿತ ಈ ಸಿನಿಮಾವನ್ನು 2000 ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಣ ಸಂಸ್ಥೆ ತೀರ್ಮಾನಿಸಿದೆ.