ನವದೆಹಲಿ: ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತೊಂದರೆಯಾಗುವಂತಹ ಬಿಜೆಪಿ ಪಕ್ಷದ ನಿಲುವಿಗೆ ವಿರುದ್ಧವಾದ ಹೇಳಿಕೆಗಳನ್ನು ನೀಡುವುದರಿಂದ ದೂರ ಉಳಿಯಬೇಕು ಎಂದು ಪಕ್ಷ ತನ್ನ ಮುಖಂಡರಿಗೆ ಎಚ್ಚರಿಸಿದೆ.
ಕಿರಣ್ ಬೇಡಿ ಬಿಜೆಪಿ ಪಕ್ಷ ಸೇರ್ಪಡೆಯಾದದ್ದನ್ನು ವಿರೋಧಿಸಿ ಬಿಜೆಪಿ ಲೋಕಸಭಾ ಸದಸ್ಯ ಮನೋಜ್ ತಿವಾರಿ ನೀಡಿದ್ದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷ, ಪಕ್ಷದ ಹಿತಾಸಕ್ತಿಗೆ ವಿರುದ್ಧವಾದ ಹೇಳಿಕೆಗಳನ್ನು ನೀಡದಂತೆ ಎಚ್ಚರಿಸಿದೆ.
ಕಿರಣ್ ಬೇಡಿ ಬಗ್ಗೆ ಪ್ರತಿಕ್ರಿಯಿಸಿದ್ದ ತಿವಾರಿ "ಕಿರಣ್ ಬೇಡಿ ಪಕ್ಷದ ಕಾರ್ಯಕರ್ತೆ. ಅವರು ಹಾಗೆಯೇ ವರ್ತಿಸಬೇಕೆ.. ವಿನಮ್ರದಿಂದಿರಬೇಕು. ಬಿಜೆಪಿ ಕಾರ್ಯಕರ್ತೆಯಾಗಿ ಅವರನ್ನು ಪಕ್ಷಕ್ಕೆ ಕರೆತಂದಿರುವುದು. ಇಲ್ಲಿಯವರೆಗೂ ಅವರು ಮುಖ್ಯಮಂತ್ರಿ ಅಭ್ಯರ್ಥಿಯೇನಲ್ಲ" ಎಂದಿದ್ದರು. ಅಲ್ಲದೆ "ನಮಗೆ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವ ನಾಯಕ ಬೇಕು ಪೊಲೀಸ್ ಅಲ್ಲ" ಎಂದು ಕೂಡ ಹೇಳಿದ್ದರು.
ಕಿರಣ್ ಬೇಡಿ ಪಕ್ಷಕ್ಕೆ ಸೇರುವ ವೇಳೆಯಲ್ಲಿ ಗೈರುಹಾಜರಾದ ಇಬ್ಬರು ಲೋಕಸಭಾ ಸದಸ್ಯರಲ್ಲಿ ತಿವಾರಿ ಕೂಡ ಒಬ್ಬರು. ಈ ಭಿನ್ನಮತದ ಸಂದರ್ಭದಲ್ಲೇ ಬಿಜೆಪಿ ಪಕ್ಷ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇಂದು ಆಯ್ಕೆ ಮಾಡಲಿದೆ ಎನ್ನಲಾಗಿದೆ.