ನವದೆಹಲಿ: ಆರ್ ಎಸ್ ಎಸ್ ಸಂಬಂಧ ಇಲ್ಲದ ನಾಯಕರು ಬಿಜೆಪಿ ಪಕ್ಷದಲ್ಲಿ ಸಾಮನ್ಯವಾಗಿ ವಿರಳ. ಇಂತಹವರಲ್ಲಿ ಒಬ್ಬರಾದ ದೆಹಲಿಯ ಮುಖ್ಯಮಂತ್ರಿ ಬಿಜೆಪಿ ನಾಮಾಂಕಿತ ಕಿರಣ್ ಬೇಡಿ ಆರ್ ಎಸ್ ಎಸ್ ಅನ್ನು ರಾಷ್ಟೀಯ ಸಂಘಟನೆ ಎಂದು ಬಣ್ಣಿಸಿರುವುದಲ್ಲದೆ, ದೇಶದ ಒಗ್ಗಟ್ಟಿಗೆ ಶ್ರಮಿಸಿದೆ ಎಂದು ಕೂಡ ಹೇಳಿದ್ದಾರೆ.
ಬಿಜೆಪಿ ಸೇರಿದ ಕೆಲವೇ ದಿನಗಳಲ್ಲಿ ನಾಯಕತ್ವದ ಪಾತ್ರ ವಹಿಸಿಕೊಂಡಿರುವ ಕಿರಣ್ ಬೇಡಿ ಬಲಪಂಥೀಯ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಶಿಸ್ತಿನ ಸಂಘಟನೆ ಹಾಗೂ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಸಂಘಟನೆ ಎಂದು ಕೂಡ ಬಣ್ಣಿಸಿದ್ದಾರೆ.
ಮಾಜಿ ಐ ಪಿ ಎಸ್ ಅಧಿಕಾರಿ, ಅಣ್ಣಾ ಹಜಾರೆ ಧರಣಿಯ ತಂಡದ ಪ್ರಮುಖ ಸದಸ್ಯೆ ಎರಡು ವರ್ಷದ ಹಿಂದೆ ತಂಡವನ್ನು ತೊರೆದು ಅರವಿಂದ್ ಕೇಜ್ರಿವಾಲ್ ಜೊತೆಗೆ ಹೋಗಿದ್ದರು. ಆದರೆ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಒಂದು ತಿಂಗಳ ಅವಧಿಯಲ್ಲಿ ನಡೆಸಿದ ಧರಣಿಯಿಂದ ಬೇಸತ್ತು ಅರವಿಂದ್ ಅವರಿಂದಲೂ ದೂರವಾಗಿದ್ದರು.
"ದೆಹಲಿ ನಗರವೇ ನಾನು ರಾಜಕೀಯಕ್ಕೆ ಸೇರಲು ಪ್ರಮುಖ ಕಾರಣ. ಕೇಜ್ರಿವಾಲ್ ಅವರು ದೆಹಲಿ ರಾಜಕೀಯಕ್ಕೆ ಒಳಬಂದಾಗಿನಿಂದಲೂ ಇಲ್ಲಿ ದೊಡ್ಡ ಪರಿವರ್ತನೆ ಆಗಿದೆ. ದೆಹಲಿಯಲ್ಲಿ ಏನು ನಡೆದರೂ ಅದು ಭಾರತವನ್ನು ಕೂಡ ಕದಡುತ್ತದೆ. ನಾನು ಅರಾಜಕ ಎಂದು ಹೇಳಿಕೊಳ್ಳುವ ಅವರು ಎಂತಹ ಮನುಷ್ಯ? ಅವರು ಮುಖ್ಯಮಂತ್ರಿ ಆಗಿದ್ದಾಗ ದೆಹಲಿ ಮೂರು ದಿನ ಸ್ತಬ್ಧವಾಗಿತ್ತು" ಎಂದು ಅರವಿಂದ್ ಕೇಜ್ರಿವಾಲ್ ಅವರ ಮೇಲೂ ಪ್ರಹಾರ ನಡೆಸಿದ್ದಾರೆ.
ಆಪ್ ಮೇಲೆ ಟೀಕಾ ಪ್ರಹಾರ ನಡೆಸಿದ ಕಿರಣ್ ಬೇಡಿ, ಆರ್ ಎಸ್ ಎಸ್ ಮೇಲೆ ಹೊಗಳಿಕೆಯ ಸುರಿಮಳೆಯನ್ನೇ ಸುರಿಸಿದ್ದಾರೆ. ಜನರು ಆರ್ ಎಸ್ ಎಸ್ ನ ನಿಜ ಸ್ವರೂಪವನ್ನು ತಿಳಿದುಕೊಳ್ಳಬೇಕಿದೆ ಎಂದಿದ್ದಾರೆ. "ನಿಮಗೆ ಗೊತ್ತಿಲ್ಲ. ನಾನು ಕಣ್ಣಾರೆ ಕಂಡಿದ್ದೇನೆ. ಅವರು ಬಹಳ ಶಿಸ್ತಿನ ಜನ ಹಾಗೂ ರಾಷ್ಟ್ರೀಯತೆಯನ್ನು ಗೌರವಿಸುವವರು. ಯುವಕರಿಗೆ ಶಿಸ್ತನ್ನು ಬೋಧಿಸುತ್ತಿರುವವರು" ಎಂದು ಆರ್ ಎಸ್ ಎಸ್ ಸಂಘಟನೆಯನ್ನು ಹಾಡಿ ಹೊಗಳಿದ್ದಾರೆ.