ನವ ದೆಹಲಿ: ದೆಹಲಿ ಮತದಾರರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಹಣ ಪಡೆದು ಆಪ್ ಪಕ್ಷಕ್ಕೆ ವೋಟ್ ಮಾಡುವಂತೆ ಕರೆ ಕೊಟ್ಟಿದ್ದ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಈಗ ಆ ಪ್ರತಿಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ರಾಜಕೀಯವನ್ನು ಶುದ್ಧಗೊಳಿಸಲು ನೀಡಿದ ಪ್ರತಿಕ್ರಿಯೆ ಅದು ಎಂದಿದ್ದರೆ.
"ಈ ಪಕ್ಷಗಳು ಲಂಚ ಕೊಡಲು ಕಪ್ಪು ಹಣವನ್ನು ಬಳಸುತ್ತಾರೆ ಹಾಗು ಮದ್ಯವನ್ನು ಹಂಚುತ್ತಾರೆ ಹಾಗು ಚುನಾವಣಾ ಟಿಕೆಟ್ ಕೊಡುಕೊಳ್ಳುತ್ತಾರೆ. ನಾನು ಅವರಿಂದ ದುಡ್ಡು ತೆಗೆದುಕೊಂಡು ಅವರಿಗೆ ಮತ ಹಾಕಬೇಡಿ ಎಂದೆ. ಅದು ಲಂಚ ಅಲ್ಲ" ಎಂದು ಕೇಜ್ರಿವಾಲ್ ವರದಿಗಾರರಿಗೆ ಹೇಳಿದ್ದಾರೆ.
"ದುಡ್ಡು ಹಂಚಿ ಮತ ಪಡೆಯಲು ಸಾಧ್ಯವಿಲ್ಲ ಎಂದು ಇನ್ನು ಕೆಲವೇ ದಿನಗಳಲ್ಲಿ ಈ ಪಕ್ಷಗಳಿಗೆ ತಿಳಿಯಲಿದೆ. ಹೀಗೆಯೇ ರಾಜಕಾರಣ ಶುದ್ಧಗೊಳ್ಳುವುದು. ಅದಕ್ಕೆ ಹೇಳಿದ್ದು ಅವರಿಂದ ದುಡ್ಡು ತೆಗೆದುಕೊಳ್ಳಿ ಆದರೆ ಅವರಿಗೆ ಮತ ಹಾಕಬೇಡಿ ಎಂದು. ಇನ್ನು ಕೆಲವೇ ದಿನಗಳಲ್ಲಿ ಈ ಪಕ್ಷಗಳಿಗೆ ತಿಳಿಯುತ್ತೆ, ದುಡ್ಡು ನೀಡುವುದರಿಂದ ಮತ ಗಳಿಸಲು ಸಾಧ್ಯವಿಲ್ಲ ಎಂದು" ಎಂದಿದ್ದಾರೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್.
"ಅಪರಾಧ ಯಾವುದು? ಯಾರಾದರು ಲಂಚ ತೆಗೆದುಕೊಂಡರೆ ಅಥವಾ ಕೊಟ್ಟರೆ ಅದು ಅಪರಾಧ. ಲಂಚ ಯಾವುದು? ನಾನು ದುಡ್ಡು ತೆಗೆದುಕೊಂಡು ಅವರಿಗೆ ಮತ ಹಾಕಿದರೆ ಅದು ಲಂಚ. ಆ ಕೊಡು ಕೊಳ್ಳುವಿಕೆ ಇದ್ದರೆ ಮಾತ್ರ ಅದು ಲಂಚವಾಗುತ್ತದೆ" ಎಂದಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಈ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು.