ನವದೆಹಲಿ: ಬಿಸಿಸಿಐ ಚುನಾವಣೆಗಳಿಂದ ಎನ್ ಶ್ರೀನಿವಾಸನ್ ಸ್ಪರ್ಧಿಸುವಂತಿಲ್ಲ ಎಂದು ತೀರ್ಪು ನೀಡಿರುವ ಸರ್ವೊಚ್ಛ ನ್ಯಾಯಾಲಯ, ಬಿಸಿಸಿಐ ಸರಿಪಡಿಸಲು ಮೂರು ಸದಸ್ಯರ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ.
ಶ್ರೀನಿವಾಸನ್ ಇಂಡಿಯನ್ ಸಿಮೆಂಟ್ ಸಂಸ್ಥೆಯ ಪಾಲುದಾರರಾಗಿದ್ದು ಹಾಗೂ ಐಪಿಎಲ್ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಒಡೆಯರಾಗಿರುವುದರಿಂದ ಹಿತಾಸಕ್ತಿಯ ಸಂಘರ್ಷ ಎದ್ದು ಕಾಣುತ್ತಿದೆ ಎಂದು ನ್ಯಾಯಾಲಯ ತಿಳಿಸಿದೆ.
ಅಲ್ಲದೆ ಬಿಸಿಸಿಐ ಗೆ ಚುನಾವಣೆಗಳನ್ನು ಮುಂದಿನ ಐದು ವಾರಗಳಲ್ಲಿ ನಡೆಸುವಂತೆ ತಾಕೀತು ಮಾಡಿದೆ. ಅಲ್ಲದೆ ಬಿಸಿಸಿಐ ಸದಸ್ಯರು ಕ್ರಿಕೆಟ್ ನಲ್ಲಿ ವಾಣಿಜ್ಯ ಹಿತಾಸಕ್ತಿ ಹೊಂದಿರಬಹುದು ಎಂಬ ವಿವಾದಾತ್ಮಕ ನಿಯಮವನ್ನು ನ್ಯಾಯಾಲಯ ಕಿತ್ತೆಸೆದಿದೆ. ಕಳೆದ ೧೩ ತಿಂಗಳುಗಳಿಂದ ನಡೆಯುತ್ತಿದ್ದ ಈ ಪ್ರಕರಣಕ್ಕೆ ಇಂದು ತೀರ್ಪು ಸಿಕ್ಕಿದೆ.
ಬಿಸಿಸಿಐ ಸರಿಪಡಿಸಲು ಮೂರು ಸದಸ್ಯರ ಸಮಿತಿಯೊಂದನ್ನು ರಚಿಸುವುದು ಅಪಮಾನದ ಸಂಗತಿ ಎಂದು ಬಿಸಿಸಿಐ ನ ಮಾಜಿ ಅಧ್ಯಕ್ಷ ಐ ಎಸ್ ಬಿಂದ್ರಾ ಬಣ್ಣಿಸಿದ್ದಾರೆ.