ನವದೆಹಲಿ: ಮಾಜಿ ಪ್ರಧಾನಮಂತ್ರಿಗಳು ದೇಶದ ರಕ್ಷಣೆಗೆ ಚ್ಯುತಿ ಬರುವಂತೆ ಮಾಡಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದು, ಆ ಪ್ರಧಾನಮಂತ್ರಿಗಳ ಹೆಸರು ಬಹಿರಂಗ ಪಡಿಸಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಮಾಜಿ ಪ್ರಧಾನಮಂತ್ರಿಗಳು ದೇಶದ ಸುರಕ್ಷತೆಗೆ ಚ್ಯುತಿ ಬರುವಂತೆ ಮಾಡಿದ್ದಾರೆ ಎಂದಾದರೆ ರಕ್ಷಣಾ ಸಚಿವರು ಆ ಪ್ರಧಾನಿಗಳ ಹೆಸರನ್ನು ಬಹಿರಂಗ ಪಡಿಸಲಿ. ಇಲ್ಲದೇ ಇದ್ದರೆ ಇಂಥಾ ಆರೋಪ ಮಾಡಿದ್ದಕ್ಕಾಗಿ ಅವರು ಸಾರ್ವಜನಿಕವಾಗಿ ಕ್ಷಮೆಯಾಚಿಸಲಿ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಹೇಳಿದ್ದಾರೆ.
ಸುಮ್ಮನೆ ಆರೋಪ ಮಾಡುವುದಕ್ಕಿಂತ ಪ್ರಧಾನಿಗಳ ಹೆಸರನ್ನು ಬಹಿರಂಗ ಪಡಿಸಲಿ ಎಂದು ಇತರ ಕಾಂಗ್ರೆಸ್ ನಾಯಕರು ಮನೀಶ್ ತಿವಾರಿ ಜತೆ ದನಿಗೂಡಿಸಿದ್ದಾರೆ.
ಗುರುವಾರ ಹಿಂದಿ ವಾರಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪರಿಕ್ಕರ್ ಈ ಹೇಳಿಕೆಯನ್ನು ನೀಡಿದ್ದರು.