ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಿಂದ ದೂರ ಉಳಿದಿರುವ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಕಿಡಿಕಾರಿದ್ದಾರೆ.
ಸದಸ್ಯತ್ವ ಅಭಿಯಾನ ಆರಂಭಿಸಲು ಜೆಡಿಎಸ್ ಇಂದು ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಆಯೋಜಸಿದ್ದು, ಈ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು, 'ಹಿಂದೆ ನಾನು ತೋಟ ಮಾರಾಟ ಮಾಡಿ ಚುನಾವಣೆಗೆ ಹೋಗುತ್ತೇನೆ ಎಂದಿದ್ದೆ. ಆಗ ಕೆಲವರು ಬಂದು ನನ್ನನ್ನು ವೋಲ್ವೊ ಬಸ್‌ನಲ್ಲಿ ಕರೆದುಕೊಂಡು ಹೋಗಿದ್ದರು. ಈಗ ಅವರೇ ಸಮಾವೇಶಕ್ಕೆ ನನಗೆ ಆಹ್ವಾನ ಬಂದಿಲ್ಲ ಎನ್ನುತ್ತಿದ್ದಾರೆ ಎಂದು ಪರೋಕ್ಷವಾಗಿ ಜಮೀರ್ ಅಹ್ಮದ್ ಖಾನ್‌ಗೆ ತಿರುಗೇಟು ನೀಡಿದರು.
ಕುಮಾರಸ್ವಾಮಿಷ್ಟು ತಾಳ್ಮೆ ನನಗೆ ಇಲ್ಲ. ಆದರೆ ಆ ತಾಳ್ಮೆಗೂ ಒಂದು ಮಿತಿ ಇರಬೇಕು ಎಂದು ಹೇಳುವ ಮೂಲಕ ದೇವೇಗೌಡರು ಭಿನ್ನಮತೀಯರಿಗೆ ಟಾಂಗ್ ನೀಡಿದರು. ಅಲ್ಲದೆ ಕುಮಾರಸ್ವಾಮಿ ಭಿನ್ನಮತೀಯರನ್ನು ಓಲೈಸುವ ಕೆಲಸ ಕೈಬಿಡಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಮನೆ ಮನೆಗೆ ಹೋಗಿ ಪಕ್ಷವನ್ನು ಕಟ್ಟಬೇಕು. ನಾನು ಸತ್ತ ನಂತರವೂ ಪಕ್ಷ ಉಳಿಯಬೇಕು. ನಾನು ಹೋದ ಮೇಲೂ ಶಾಸಕ ವೈಎಸ್‌ವಿ ದತ್ತ ಪಕ್ಷದಲ್ಲೇ ಇರಬೇಕು ಎಂದು ದೇವೇಗೌಡರು ಭಾವುಕರಾಗಿ ನುಡಿದರು.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರುದ್ಧವೂ ವಾಗ್ದಾಳಿ ನಡೆಸಿದ ದೇವೇಗೌಡರು, ಸಿದ್ದರಾಮಯ್ಯ ಎಲ್ಲಾ ಭಾಗ್ಯವನ್ನು ಕೊಟ್ಟಿದ್ದಾರೆ. ಈಗ ದೌರ್ಭಾಗ್ಯ ಒಂದೇ ಬಾಕಿ ಇದೆ. ಆ ದೌರ್ಭಾಗ್ಯ ಕಾಂಗ್ರೆಸ್ ನದ್ದೋ, ಜನರದ್ದೋ ಗೊತ್ತಿಲ್ಲ ಎಂದರು.
ಪಕ್ಷದ ರಾಜ್ಯಾಧ್ಯಕ್ಷರಾಗಲಿ ಅಥವಾ ಇತರೆ ಯಾವುದೇ ನಾಯಕರು ಸಮಾವೇಶಕ್ಕೆ ಬರುವಂತೆ ತಮಗೆ ಆಹ್ವಾನ ನೀಡಿಲ್ಲ. ಹೀಗಾಗಿ ತಾವು ಸಮಾವೇಶಕ್ಕೆ ಹೋಗಿಲ್ಲ ಎಂದು ಜಮೀರ್ ಅಹ್ಮದ್ ಖಾನ್ ಇಂದು ಬೆಳಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.