ನವದೆಹಲಿ: ಚುನಾವಣಾ ಆಯೋಗದ ಎಚ್ಚರಿಕೆಯ ಹೊರತಾಗಿಯೂ, ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ಮತ್ತೆ ದೆಹಲಿ ಮತದಾರರಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ದುಡ್ಡು ಸ್ವೀಕರಿಸಿ ಆದರೆ ಆಪ್ ಪಕ್ಷಕ್ಕೆ ಮತ ಹಾಕುವಂತೆ ಹೇಳಿದ್ದಾರೆ.
"ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ನಿಮಗೆ ದುಡ್ಡಿನ ಆಮಿಷ ಒಡ್ಡುತ್ತಿವೆಯೆ? ಹಾಗಿದ್ದಲ್ಲಿ, ಬೇಡ ಎನ್ನಬೇಡಿ. ದುಡ್ಡು ತೆಗೆದುಕೊಳ್ಳಿ. ಅವರು ಹೊದಿಕೆಗಳನ್ನು ಮತ್ತು ಅಕ್ಕಿ ಚೀಲಗಳನ್ನು ವಿತರಿಸುತ್ತಿರುವುದು ನನಗೆ ತಿಳಿದಿದೆ. ಅವೆಲ್ಲವನ್ನೂ ಸ್ವೀಕರಿಸಿ, ಆದರೆ ಕುಟುಂಬಗಳನ್ನು ಹಾಳುಗೆಡುವ ಮದ್ಯವನ್ನು ತಿರಸ್ಕರಿಸಿ" ಎಂದು ಚಪ್ಪಾಳೆ ಮತ್ತು ಹರ್ಷೋದ್ಘಾರದ ನಡುವೆ ಜನಸಂದಣಿಯ ಸಭೆಯಲ್ಲಿ ಹೇಳಿದ್ದಾರೆ.
ಚುನಾವಣಾ ಪ್ರಚಾರದ ವೇಳೆಯಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಚುನಾವಣಾ ಆಯೋಗ ದೆಹಲಿಯ ಮಾಜಿ ಮುಖ್ಯಮಂತ್ರಿಗೆ ತಾಕೀತು ಮಾಡಿತ್ತು. ಈ ಯಾವುದೇ ಎಚ್ಚರಿಕೆಗೆ ಸೊಪ್ಪು ಹಾಕದ ಕೇಜ್ರಿವಾಲ್ ಜಂಗ್ ಪುರ ಮತ್ತು ಕಸ್ತೂರಬಾ ನಗರಗಳ ರ್ಯಾಲಿಯಲ್ಲಿ ಇಂತಹ ಹೇಳಿಕೆಗಳನ್ನು ಮತ್ತೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.