ತಿರುಪತಿ: ತಮ್ಮ ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಇಂದು ಸಿದ್ದರಾಮಯ್ಯ ಅವರ ವಿವಾಹ ವಾರ್ಷಿಕೋತ್ಸವ. ಈ ಹಿನ್ನೆಲೆಯಲ್ಲಿ ಸಿಎಂ ನಿನ್ನೆಯೇ ತಮ್ಮ ಕುಟುಂಬ ವರ್ಗದೊಂದಿಗೆ ತಿರುಪತಿಗೆ ತೆರಳಿದ್ದರು. ಸಿದ್ದರಾಮಯ್ಯ ಅವರಿಗೆ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಸಾಥ್ ನೀಡಿದರು.
ದೇವರ ದರ್ಶನ ಪಡೆದ ಬಳಿಕ, ತಿರುಪತಿ ಭೇಟಿಯ ಉದ್ದೇಶ ಏನು ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಕಳೆದ ಎರಡು ವರ್ಷಗಳಿಂದ ಬ್ಯುಸಿಯಾಗಿದ್ದರಿಂದ ತಿರುಪತಿಗೆ ಬರಲು ಸಾಧ್ಯವಾಗಿರಲಿಲ್ಲ. ಈಗ ಬಿಡುವು ಮಾಡಿಕೊಂಡು ಬಂದಿದ್ದೇನೆ. ರಾಜ್ಯ ಹಾಗೂ ದೇಶದ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ.