ನವದೆಹಲಿ: ದೆಹಲಿಯ ಈಶಾನ್ಯ ಭಾಗದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ರೋಡ್ ಶೋ ನಡೆಸುವಾಗ ಸಿಡಿದ ಪಟಾಕಿಯ ಕಿಡಿಯೊಂದು ಖಾಸಗಿ ಕಾರಿನೊಳಗೆ ಬಿದ್ದು ಕಾರಿಗೆ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
ಕಾರಿನ ಮಾಲೀಕ ಅಪರಿಚಿತ ವ್ಯಕ್ತಿಗಳ ಮೇಲೆ ಎಫ್ ಐ ಆರ್ ದಾಖಲಿಸಿದ್ದಾರೆ.
ಜಫ್ರಬಾದ್ ಪ್ರದೇಶದಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ದೆಹಲಿ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಬೇಡಿ ರೋಡ್ ಶೋ ನಡೆಸುತ್ತಿದ್ದಾಗ, ಪಟಾಕಿಗಳನ್ನು ಸಿಡಿಸುತ್ತಿದ್ದು ಅದರ ಕಿಡಿ ಅಲ್ಲಿ ನಿಂತಿದ್ದ ಒಂದು ಖಾಸಗಿ ಕಾರಿನ ಮೇಲೆ ಬಿದ್ದು ಕಾರಿಗೆ ಬೆಂಕಿ ಹತ್ತಿಕೊಂಡಿದೆ.
ಐ ಪಿ ಸಿ ಸೆಕ್ಷನ್ ೨೮೫ ಮತ್ತು ೪೨೭ರ ಅಡಿಯಲ್ಲಿ ಅಪರಿಚಿತರ ಮೇಲೆ ಕೇಸು ದಾಖಲಾಗಿದ್ದು, ಈ ವಿಷಯದಲ್ಲಿ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.