ನವದೆಹಲಿ: ದೆಹಲಿ ಮುಖ್ಯಮಂತ್ರಿ ಆಕಾಂಕ್ಷಿ, ಬಿಜೆಪಿ ಅಭ್ಯರ್ಥಿ ಕಿರಣ್ ಬೇಡಿ ಮಂಗಳವಾರ ನಡೆಸಿದ ರೋಡ್ ಶೋದಲ್ಲಿ ನರೇಂದ್ರ ಮೋದಿ ಮತ್ತು ಬಾಬಾ ರಾಮ್‌ದೇವ್‌ರನ್ನು ಹೋಲುವ ವ್ಯಕ್ತಿಗಳು ಭಾಗವಹಿಸಿ ಅಚ್ಚರಿ ಮೂಡಿಸಿದರು.
ಬಿಳಿ ಬಣ್ಣದ ಆಡಿ ಕಾರಿನಲ್ಲಿ ಬಂದಿಳಿದ ಈ ವ್ಯಕ್ತಿಗಳು ಕಿರಣ್ ಬೇಡಿ ಪ್ರಚಾರ ಕಾರ್ಯದಲ್ಲಿ ಎಲ್ಲರ ಗಮನ ಸೆಳೆದರು.
ಶಹರಾನ್‌ಪುರದಲ್ಲಿರುವ ಆರ್ ಸಿ ಇಂಟರ್ ಕಾಲೇಜ್‌ನ ದೈಹಿಕ ಶಿಕ್ಷಣ ಅಧ್ಯಾಪಕ 52ರ ಹರೆಯದ ಅಭಿನಂದನ್ ಪಾಠಕ್ ಮೋದಿಯವರನ್ನು ಹೋಲುತ್ತಿದ್ದಾರೆ. ಅದೇ ವೇಳೆ ಇಲ್ಲಿನ ಮುಖರ್ಜೀ ನಗರದ ಮೊಬೈಲ್ ಅಂಗಡಿಯೊಂದರ ಮಾಲೀಕ 42ರ ಹರೆಯದ ಸಂಜಯ್ ರಾಮ್‌ದೇವ್‌ರನ್ನು ಹೋಲುತ್ತಿದ್ದಾರೆ.
ಪ್ರಚಾರ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರೆಲ್ಲರೂ ಮೋದಿ ಮತ್ತು ರಾಮ್‌ದೇವ್ ಹೋಲುವ ವ್ಯಕ್ತಿಗಳ ಮೇಲೆಯೇ ದೃಷ್ಟಿ ನೆಟ್ಟಿದ್ದರು. ಜನರ ಗಮನವನ್ನು ತಮ್ಮತ್ತ ಸೆಳೆಯಲು ಕಿರಣ್ ಬೇಡಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.
ನಾನು ಮೋದಿಯನ್ನು ಹೋಲುತ್ತಿರುವುದಕ್ಕೆ ಖುಷಿ ಪಡುತ್ತೇನೆ. ನಾನು ಬಿಜೆಪಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿದ್ದು, ಮೋದಿಯವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಇಲ್ಲಿದ್ದೇನೆ. ಆಪ್ ಸುಳ್ಳಿನ ಜನರ ಪಾರ್ಟಿ ಎಂದು ಸಾಬೀತು ಪಡಿಸಬೇಕಾಗಿದೆ ಎಂದು ಪಾಠಕ್ ಹೇಳಿದ್ದಾರೆ.
ನಾನು ಕಳೆದ ವರ್ಷ ಹರಿದ್ವಾರ್‌ನಲ್ಲಿ ಪಾಠಕ್ ಅವರನ್ನು ಭೇಟಿಯಾದೆ. ಅಲ್ಲಿಂದ ನಾವಿಬ್ಬರೂ ಜತೆಗೇ ಕೆಲಸ ಮಾಡೋಣ ಅಂತ ತೀರ್ಮಾನಿಸಿದೆವು ಎಂದು ಸಂಜಯ್ ಹೇಳಿದ್ದಾರೆ.