ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಜೊತೆ ಜಂಗಿ ಕುಸ್ತಿಗೆ ಬಿದ್ದಿರುವ ಎಎಪಿ ಸರ್ಕಾರ, ಬುಧವಾರ ಪೊಲೀಸ್ ಸಹನಿರ್ದೇಶಕ ಎಂ ಕೆ ಮೀನ ಅವರನ್ನು ಭ್ರಷ್ಟಾಚಾರ ತಡೆ ವಿಭಾಗ (ಎಸಿಬಿ) ನಿರ್ದೇಶಕರಾಗಿ ಒಪ್ಪಿಕೊಂಡಿದ್ದರು ಅವರ ರೆಕ್ಕೆಗಳನ್ನು ಕತ್ತರಿಸಲು ಪ್ರಯತ್ನಿಸಿದೆ.
ಲೆಫ್ಟಿನೆಂಟ್ ಗವರ್ನರ್ ನೇಮಕ ಮಾಡಿರುವ ಮೀನಾ ಅವರನ್ನು ಕಛೇರಿಗೆ ಬರದಂತೆ ತಡೆಯಲು ಸಾಧ್ಯವಿಲ್ಲ ಎಂದು ದೆಹಲಿ ಉಚ್ಛ ನ್ಯಾಯಾಲಯ ತೀರ್ಪು ನೀಡಿದ ಹಿನ್ನಲೆಯಲ್ಲಿ ಎಎಪಿ ಈ ಹೆಜ್ಜೆಯಿಟ್ಟಿದೆ.
ಎಸಿಬಿ ನಿರ್ದೇಶಕರಾಗಿ ಮೀನಾ ಅವರನ್ನು ಒಪ್ಪಿಕೊಂಡು ಎಎಪಿ ಸರ್ಕಾರ ಬುಧವಾರ ಆದೇಶ ಹೊರಡಿಸಿದ್ದರು, ಈ ನೇಮಕದ ಸಿಂಧುತ್ವ ನ್ಯಾಯಾಲದಲ್ಲಿ ಇತ್ಯರ್ಥ ಆಗುವವರೆಗೆ ತರಬೇತಿ ಕೆಲಸ ಮತ್ತು ಸದ್ಯದ ಪ್ರಕರಣಗಳನ್ನಷ್ಟೇ ನೋಡಿಕೊಳ್ಳಲು ಹೇಳಿ ಅವರ ಅಧಿಕಾರಕ್ಕೆ ಕೊಕ್ಕೆ ಹಾಕಿದೆ.
ಮುಖ್ಯ ಕೆಲಸಗಳ ಮೇಲ್ವಿಚಾರಣೆಗೆ ಹೆಚ್ಚುವರಿ ಮಹಾನಿರ್ದೇಶಕ ಎಸ್ ಎಸ್ ಯಾದವ್ ಅವರನ್ನು ನೇಮಿಸಿವಂತೆ ಸರ್ಕಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸೂಚಿಸಿದೆ.
ಆದರೆ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸ್ ಮಹಾನಿರ್ದೇಶಕ ಬಿ ಎಸ್ ಬಸ್ಸಿ, "ಮೀನಾ ಎಸಿಬಿ ನಿರ್ದೇಶಕ ಮತ್ತು ನಿರ್ದೇಶಕರಾಗಿಯೇ ಉಳಿದಿರುತ್ತಾರೆ". ಮೀನಾ ಎಸಿಬಿ ನಿರ್ದೇಶಕರಾಗಿರುವುದರಿಂದ ಎಎಪಿ ಸರ್ಕಾರ ಅವರ ಅಧಿಕಾರಗಳನ್ನು ಕಡಿತಗೊಳಿಸಿರುವುದಕ್ಕೆ ಯಾವುದೇ ಮಹತ್ವ ಇಲ್ಲ ಎಂದಿದ್ದಾರೆ.
ಮೀನಾ ಕೂಡ ಇದನ್ನೇ ಸ್ಪಷ್ಟೀಕರಿಸಿದ್ದು ನಾನು ಎಸಿಬಿ ಮುಖ್ಯಸ್ಥ ಮತ್ತು ನಾನದನ್ನು ಮುನ್ನಡೆಸುತ್ತೇನೆ ಹಾಗು ಜಂಗ್ ಅವರಿಗೆ ನೇರವಾಗಿ ವರದಿ ಸಲ್ಲಿಸುತ್ತೇನೆ ಎಂದಿದ್ದಾರೆ. ಅಧಿಕಾರ ಶ್ರೇಣಿಯ ಪ್ರಕಾರ ನನ್ನ ಕೆಳಗಿನ ಅಧಿಕಾರಿಗಳಿಗೆ ನಾನೇ ಕೆಲಸಗಳನ್ನು ವಿಂಗಡಿಸುತ್ತೇನೆ ಎಂದು ಅವರು ಗುಡುಗಿದ್ದಾರೆ.
ಅಂತು ಇಂತು ಸರ್ಕಾರ ಮತ್ತು ಗವರ್ನರ್ ನಡುವಿನ ಜಂಗಿ ಕುಸ್ತಿಗೆ ಇನ್ನೂ ತೆರೆಬಿದ್ದಂತಿಲ್ಲ.