ಬೆಂಗಳೂರು: ಬಿಬಿಎಂಪಿ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಿಂದ ಸ್ಪರ್ಧಿಸಲುದ್ದೇಶಿಸಿರುವ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯಲಾರಂಭಿಸಿದೆ. 198 ವಾರ್ಡುಗಳಲ್ಲಿ ಸ್ಪರ್ಧಿಸಲು ಬರೋಬ್ಬರಿ ಒಂದು ಸಾವಿರಕ್ಕಿಂತ ಹೆಚ್ಚಿನ ಮಂದಿ ಅರ್ಜಿ ಸಲ್ಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಸುಬ್ಬ ನರಸಿಂಹ, ಆಕಾಂಕ್ಷಿಗಳ ಪಟ್ಟಿ ಬಹುದೊಡ್ಡದಿದೆ. ಬೇರೆ ಬೇರೆ ರೀತಿಯಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಇಷ್ಟೊಂದು ಬೇಡಿಕೆ ಕಂಡು ಆಶ್ಚರ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ವಿವರಿಸಿದರು. ವಿವಿಧ ಸಂಘಸಂಸ್ಥೆಗಳ ಮೂಲಕ ನಡೆಸಿದ ಚಟುವಟಿಕೆಗಳ ಫೋಟೋ, ದಿನಪತ್ರಿಕೆಗಳಲ್ಲಿ ಬಂದ ತುಣುಕು, ಕರಪತ್ರ ಹೀಗೆ ಬಗೆಬಗೆಯ ಮಾಹಿತಿಯನ್ನು ಕಡತ ರೂಪದಲ್ಲಿ ಸಲ್ಲಿಸುತ್ತಿದ್ದಾರೆ. ಕೆಲವರಂತೂ ವಿವಿಧ ಕಾರ್ಯಕ್ರಮದ ಬ್ಯಾಡ್ಜ್‍ಗಳು, ಡಿಜಿಟಲ್ ಫೋಟೋಗಳನ್ನು ಲಗತ್ತಿಸಿ ಪಕ್ಷದ ಮುಖಂಡರನ್ನು ಹುಬ್ಬೇರಿಸುವಂತೆ ಮಾಡುತ್ತಿದ್ದಾರೆ. ಬಿಜೆಪಿಯು ಬಿಬಿಎಂಪಿ ಚುನಾವಣೆಗಾಗಿಯೇ ಒಂದು ಕೋರ್ ಕಮಿಟಿ ರಚಿಸಿಕೊಂಡು ಚುನಾವಣೆಗೆ ಕಾರ್ಯತಂತ್ರ ರೂಪಿಸುತ್ತಿದ್ದರೆ, ಇತ್ತ ಟಿಕೆಟ್ ಆಕಾಂಕ್ಷಿಗಳು ಪಕ್ಷದ ಪ್ರಭಾವಿ ಮುಖಂಡರು, ಬೆಂಗಳೂರಿನ ಶಾಸಕರನ್ನು ಹಿಡಿದು ಟಿಕೆಟ್ ಗಾಗಿ ಒತ್ತಡ ಹೇರಲಾರಂಭಿಸಿದ್ದಾರೆ.
ಈ ಬೆಳವಣಿಗೆ ಕುರಿತಂತೆ ಪ್ರತಿಕ್ರಿಯಿಸಿದ ಜಯನಗರ ಕ್ಷೇತ್ರದ ಶಾಸಕ ವಿಜಯಕುಮಾರ್, ಟಿಕೆಟ್‍ಗಾಗಿ ಅರ್ಜಿ ಹೇಗೆ ಸಲ್ಲಿಸುತ್ತಾರೆ, ಯಾರಿಂದ ಒತ್ತಡ ಹೇರಿಸುತ್ತಾರೆ ಎಂಬುದು ಮುಖ್ಯವಲ್ಲ. ಪಕ್ಷದ ಸಂಘಟನೆಯು ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ವ್ಯಕ್ತಿಯ ಹಿನ್ನೆಲೆ, ಸಾಮಾಜಿಕ ಚಟುವಟಿಕೆಗಳನ್ನೂ ಸಹ ಗಮನಿಸಲಾಗುತ್ತದೆ. ಇದರ ಜೊತೆಗೆ ಪಕ್ಷದ ಇತ್ತೀಚಿನ ನಿಯಮದಂತೆ ಕನಿಷ್ಟ 100 ಸದಸ್ಯರನ್ನಾದರೂ ಮಾಡಿರಬೇಕಾಗುತ್ತದೆ. ಇದೂ ಸಹ ಈ ಬಾರಿ ಪ್ರಮುಖವಾಗುತ್ತದೆ ಎಂದರು.