ಇಸ್ಲಮಾಬಾದ್: ನೆರೆಹೊರೆಯ ರಾಷ್ಟ್ರಗಳೊಂದಿಗಿನ ಸಂಬಂಧಕ್ಕೆ ಹುಳಿ ಹಿಂಡುವ ಹೇಳಿಕೆಯಲ್ಲಿ ಅಸ್ತಿತ್ವಕ್ಕೆ ಧಕ್ಕೆಯಾದಲ್ಲಿ ಪಾಕಿಸ್ತಾನ ಅಣ್ವಸ್ತ್ರಗಳನ್ನು ಬಳಸಲಿದೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜ ಅಸೀಫ್ ಹೇಳಿದ್ದಾರೆ.
"(ನಾವು ಅವುಗಳನ್ನು ಬಳಸಬೇಕಾದ ಅಗತ್ಯ ಬಿದ್ದರೆ) ನಮ್ಮ ಉಳಿವಿಗಾಗಿ, ನಾವು ಬಳಸುತ್ತೇವೆ" ಎಂದು ಅಸೀಫ್ ಜಿಯೋ ನ್ಯೂಸ್ ಗೆ ತಿಳಿಸಿದ್ದಾರೆ.
ಅಣ್ವಸ್ತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದಲ್ಲ, ಇವುಗಳ ಆಯ್ಕೆ ಕೂಡ ನಮ್ಮಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.
"ಅಂತಹ ಆಯ್ಕೆಯ ಪ್ರಶ್ನೆ ಎಂದೂ ಏಳದಿರಲಿ ಎಂದು ನಾವೆಲ್ಲಾ ಪ್ರಾರ್ಥಿಸೋಣ, ಆದರೆ ನಮ್ಮ ಉಳಿವಿನ ಪ್ರಮೇಯ ಬಂದರೆ, ಬಳಸುತ್ತೇವೆ" ಎಂದು ಅವರು ತಿಳಿಸಿದ್ದಾರೆ.
ಭಾರತ ಕೆಲವೊಮ್ಮೆ ನೇರವಾಗಿ ಹಾಗು ಕೆಲವೊಮ್ಮೆ ಸುತ್ತಿ ಬಳಸಿ ಪಾಕಿಸ್ತಾನದಲ್ಲಿ ಭಯೋತ್ಪಾದನೆಯನ್ನು ಹರಡುತ್ತಿದೆ ಎಂದು ಅಣ್ವಸ್ತ್ರ ರಾಷ್ಟ್ರವಾಗಿರುವ ಭಾರತವನ್ನು ಇದೇ ಸಂದರ್ಭದಲ್ಲಿ ದೂರಿದ್ದಾರೆ.