ಪ್ರಧಾನ ಸುದ್ದಿ

ಮೃತ ಪತ್ರಕರ್ತನ ಕುಟುಂಬ ಸದಸ್ಯನಿಗೆ ಉದ್ಯೋಗ ನೀಡುವುದಾಗಿ ಚೌಹಾನ್ ಭರವಸೆ

Guruprasad Narayana

ನವದೆಹಲಿ: ವ್ಯಾಪಂ ಹಗರಣವನ್ನು ವರದಿ ಮಾಡುತ್ತಿದ್ದ ಪತ್ರಕರ್ತ ಅಕ್ಷಯ್ ಸಿಂಗ್ ನಿಗೂಢ ಸಾವಿನ ನಿಷ್ಪಕ್ಷಪಾತ ತನಿಖೆ ಮಾಡುವುದಾಗಿ ಭರವಸೆ ನೀಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮೃತ ಪತ್ರಕರ್ತನ ಕುಟುಂಬ ಸದಸ್ಯರೊಬ್ಬರಿಗೆ ಉದ್ಯೋಗ ನಿಡುವ ಭರವಸೆ ನಿಡಿದ್ದಾರೆ.

ಮೃತ ಪತ್ರಕರ್ತನ ಕುಟುಂಬವರ್ಗವನ್ನು ಭೇಟಿ ಮಾಡಿದ ಚೌಹಾನ್ ನಿಷ್ಪಕ್ಷಪಾತ ತನಿಖೆಯ ವಚನ ನೀಡಿದ್ದಾರೆ.

ಸರ್ಕಾರಿ ಉದ್ಯೋಗಾವಕಾಶ ಅಲ್ಲದೆ ಅಕ್ಷಯ್ ಸಿಂಗ್ ಅವರ ಸಹೋದರಿಗೆ ಧನಸಹಾಯದ ಭರವಸೆಯನ್ನೂ ನೀಡಿದ್ದಾರೆ.

ಮುಖ್ಯಮಂತ್ರಿಯವರು ಚೌಹಾನ್ ಅವರು ಕುಟುಂಬ ಸದಸ್ಯರೆಲ್ಲರಿಗೂ ಉದ್ಯೋಗ ನೀಡುವ ಭರವಸೆ ನೀಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದರೆ, ಅಕ್ಷಯ್ ಸಿಂಗ್ ಕುಟುಂಬ ಪತ್ರಕರ್ತನ ಸಹೋದರಿಗಷ್ಟೇ ಮುಖ್ಯಮಂತ್ರಿ ಉದ್ಯೋಗ ನೀಡುವುದಾಗಿ ಹೇಳಿದರು ಎಂದು ತಿಳಿಸಿದೆ.

ವ್ಯಾಪಂ ಹಗರಣವನ್ನು ವರದಿ ಮಾಡುತ್ತಿದ್ದ ದೆಹಲಿ ಮೂಲದ ಸುದ್ದಿವಾಹಿನಿಯ ಪತ್ರಕರ್ತ ಜುಲೈ ೪ ರಂದು ನಿಗೂಢವಾಗಿ ಸಾವನ್ನಪ್ಪಿದ್ದರು.

"ನಮಗೆ ಏನು ಬೇಡ, ನಿಷ್ಪಕ್ಷಪಾತ ತನಿಖೆ ನಡೆಸಿ ಸಾಕು" ಎಂದು ಕುಟುಂಬ ಸದಸ್ಯರೊಬ್ಬರು ತಿಳಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಇದಕ್ಕೂ ಮುಂಚೆ ಮೃತ ಪತ್ರಕರ್ತನ ಸಹೋದರಿಗೆ ಉದ್ಯೋಗಾವಕಾಶ ನೀಡುವುದಾಗಿ ಹೇಳಿದ್ದರು.

ಇಂದಷ್ಟೇ ಸುಪ್ರೀಮ್ ಕೋರ್ಟ್ ವ್ಯಾಪಂ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ.

SCROLL FOR NEXT