ನವದೆಹಲಿ: ವಿದೇಶಿ ವಿನಿಮಯ ನಿಯಮ ಉಲ್ಲಂಘನೆಗೆ ಸಂಬಂಧಪಟ್ಟ ಕ್ರಿಮಿನಲ್ ಪ್ರಕರಣವನ್ನು ಕೈಬಿಡಬೇಕೆಂದು ಕೋರಿ ಕಿಂಗ್ ಫಿಶರ್ ಮಾಲೀಕ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.
ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರ ನೇತೃತ್ವದ ನ್ಯಾಯಪೀಠ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದು, ಈ ಪ್ರಕರಣದಲ್ಲಿ ಮಲ್ಯ ಅವರಿಗೆ 10 ಲಕ್ಷ ರುಪಾಯಿ ದಂಡ ವಿಧಿಸಿದೆ ಹಾಗೂ ಜಾರಿ ನಿರ್ದೇಶನಾಲಯದ ತನಿಖೆ ಮುಂದುವರೆಯಲಿದೆ ಎಂದು ಹೇಳಿದೆ.
ಯುಬಿ ಸಮೂಹದ ಮುಖ್ಯಸ್ಥ ವಿಜಯ್ ಮಲ್ಯ ಅವರು ವಿದೇಶದಲ್ಲಿ ಕಿಂಗ್‌ಫಿಶರ್ ಬ್ರಾಂಡ್‌ನ ಪ್ರಚಾರಕ್ಕಾಗಿ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (ಎಫ್‌ಇಆರ್‌ಎ) ಉಲ್ಲಂಘಿಸಿ ಬಂಡವಾಳ ಸಂಗ್ರಹಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿತ್ತು.
ಈ ಸಂಬಂಧ ವಿಜಯ್ ಮಲ್ಯ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆಯ ಪ್ರಕ್ರಿಯೆ ಆರಂಭಿಸಿತ್ತು. ಈ ತನಿಖೆಗೆ ತಡೆ ನೀಡಬೇಕು ಎಂದು ಕೋರಿ ಮಲ್ಯ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಕಿಂಗ್‍ಫಿಶರ್ ಕಂಪೆನಿಯ ಲೋಗೋವನ್ನು 1996, 1997 ಮತ್ತು 1998ರಲ್ಲಿ ನಡೆದ ಫಾರ್ಮುಲಾ ಒನ್ ರೇಸ್ ಸಮಯದಲ್ಲಿ ಪ್ರದರ್ಶಿಸಲು ಇಂಗ್ಲೆಂಡ್ ಮೂಲ ಒಂದು ಕಂಪನಿಗೆ ವಿಜಯ್ ಮಲ್ಯ ಅವರು 200 ದಶಲಕ್ಷ ಡಾಲರ್ ಹಣವನ್ನು ಪಾವತಿಸಿದ್ದರು. ಈ ಹಣ ಪಾವತಿ ಮಾಡಬೇಕಾದರೆ ಮಲ್ಯ ಆರ್‍ಬಿಐಯ ಅನುಮತಿ ಪಡೆದಿಲ್ಲ. ಕಾನೂನಿನ ಪ್ರಕಾರ ಅನುಮತಿ ಪಡೆದು ಹಣ ಪಾವತಿ ಮಾಡಬೇಕು. ಈ ಹಿನ್ನಲೆಯಲ್ಲಿ ಮಲ್ಯ ವಿದೇಶಿ ವಿನಿಮಯ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪಕ್ಕೆ ಸಿಲುಕಿದ್ದಾರೆ.