ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಪ್ರಕರಣ ಭಾರಿ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ಹೈಕೋರ್ಟ್ ಬುಧವಾರ ಲೋಕಾಯುಕ್ತ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಸರ್ಕಾರದ ವಿವಿಧ ಇಲಾಖೆಯಲ್ಲಿ ಲಕ್ಷಾಂತರ ನೌಕರರಿದ್ದಾರೆ, ಈ ಸಂಖ್ಯೆಗೆ ಹೋಲಿಸಿದರೆ, ಸರಿಯಾಗಿ ಪ್ರಕರಣ ದಾಖಲಾಗಿಲ್ಲ. ಕೇವಲ ಒಂದು ಪರ್ಸೆಂಟ್ ಪ್ರಕರಣಗಳೂ ದಾಖಲಾಗಿಲ್ಲ ಎಂದು ಹೈಕೋರ್ಟ್ ಲೋಕಾಯುಕ್ತ ಪೊಲೀಸರ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಎಷ್ಟು ಪ್ರಕರಣಗಳಲ್ಲಿ ಬಿ ರಿಪೋರ್ಟ್ ಸಲ್ಲಿಕೆಯಾಗಿದೆ ಎಂದು ಲೋಕಾಯುಕ್ತ ವಕೀಲರನ್ನು ಪ್ರಶ್ನಿಸಿದ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲಗೌಡ ಅವರು, ಅಕ್ರಮ ಸಂಪತ್ತು ಬಿ ರಿಪೋರ್ಟ್‌ನಿಂದ ಸಕ್ರಮವಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಕೇಸ್‌ಗಳ ತನಿಖೆಯಲ್ಲಿ ಭಾರಿ ವಿಳಂಬವಾಗುತ್ತಿದೆ. ಕೋರ್ಟ್‌ಗಳಲ್ಲೂ ಪ್ರಕರಣಗಳ ವಿಚಾರಣೆ ಚುರುಕಾಗಿಲ್ಲ. ಇನ್ನು ಸರ್ಕಾರದಿಂದಲೂ ಪ್ರಾಸಿಕ್ಯೂಷನ್ ವಿಚಾರದಲ್ಲಿ ವಿಳಂಬವಾಗುತ್ತಿದೆ. 105 ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಅನುಮತಿ ಬಾಕಿ. ಇನ್ನು ಕೆಲವು ಪ್ರಕರಣಗಳಲ್ಲಿ ವರ್ಷಗಳಿಂದ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ನ್ಯಾ.ವೇಣುಗೋಪಾಲಗೌಡ ಅವರು, ವಿಳಂಬಕ್ಕೆ ಕಾರಣ ನೀಡುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ. ಅಲ್ಲದೆ ಕಳೆದ ಒಂದು ವರ್ಷದ ಮಾಸಿಕ ಪರಿಶೀಲನಾ ಸಭೆಯ ವಿವರ ನೀಡುವಂತೆ ಲೋಕಾಯುಕ್ತ ವಕೀಲರಿಗೆ ಹೈಕೋರ್ಟ್ ಸೂಚಿಸಿದೆ.