ಬೆಂಗಳೂರು: ಒಂದು ಕಡೆ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದೆ. ಮತ್ತೊಂದು ಕಡೆ ರೈತರ ಆತ್ಮಹತ್ಯೆ ವಿಚಾರದಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ರಾಜಕೀಯವೂ ಜೋರಾಗಿದೆ.
ಪ್ರತಿಪಕ್ಷ ಬಿಜೆಪಿ ಆರು ತಂಡಗಳಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾದ ರೈತರ ಮನೆಗೆ ತೆರಳಿ, ಸಾಂತ್ವಾನ ಹೇಳಲು ಮುಂದಾಗಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗೆ ಭೇಟಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚಿಸಿದ್ದಾರೆ.
ಈ ಸಂಬಂಧ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿರುವ ಸಿಎಂ, ಖುದ್ದು ಆತ್ಮಹತ್ಯೆ ಮಾಡಿಕೊಂಡ ರೈತರ ಮನೆ ತೆರಳಿ, ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿ ಮತ್ತು ಪರಿಹಾರ ನೀಡುವಂತೆ ಸೂಚಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮೃತ ರೈತರ ಕುಟುಂಬಗಳಿಗೆ ಬೇಟಿ ನೀಡಲು ನಿರ್ಧರಿಸಿದ್ದು, ಇಂದಿನಿಂದ ಎರಡು ದಿನಗಳ ಕಾಲ ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ರೈತರಿಗೆ ಆತ್ಮಸ್ಥೈಯ ತುಂಬಲು ಮುಂದಾಗಿದ್ದಾರೆ. ಇದಲ್ಲದೇ, ರಾಜ್ಯದ ಬೇರೆ ಭಾಗಗಳಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೂ ಭೇಟಿ ನೀಡಲು ನಿರ್ಧರಿಸಿದ್ದಾರೆ.
ಇನ್ನು ರೈತ ಆತ್ಮಹತ್ಯೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯಪಾಲ ವಜುಭಾಯಿ ವಾಲಾ ಅವರು ನಿನ್ನೆಯಷ್ಟೇ ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದು, ವರದಿ ನೀಡುವಂತೆ ಸೂಚಿಸಿದ್ದರು.