ಬೆಂಗಳೂರು: ಜೂನ್ 19ರಿಂದ ಆರಂಭವಾದ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದೆ. ರಾಜ್ಯಾದ್ಯಂತ ರೈತರ ಸಾವಿನ ಸರಣಿ ಹೆಚ್ಚಾಗುತ್ತಿದ್ದು, ಮತ್ತೆ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿಯೂ ರೈತರ ಆತ್ಮಹತ್ಯೆ ಸರಣಿ ಮುಂದುವರೆದಿದ್ದು, ಮಳವಳ್ಳಿ ತಾಲೂಕಿನ ಧನಗೂರು ಗ್ರಾಮದ 42 ವಯಸ್ಸಿನ ಪುಟ್ಟಸ್ವಾಮಿ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ.
30 ಕುಂಟೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದ ಪುಟ್ಟಸ್ವಾಮಿ ಸುಮಾರು 4 ಲಕ್ಷ ಸಾಲ ಮಾಡಿಕೊಂಡಿದ್ದರು. ಕಬ್ಬಿಗೆ ಉತ್ತಮ ಬೆಲೆ ಸಿಗದೆ ಹಿನ್ನಲೆಯಲ್ಲಿ ಹೊಲದಲ್ಲೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಎಂ ಹೊಸಹಳ್ಳಿಯಲ್ಲಿ 22 ವರ್ಷದ ಮಂಜುನಾಥ್ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ.
ಮೂರು ಎಕರೆ ಜಮೀನು ಹೊಂದಿದ್ದ ಮಂಜುನಾಥ್, 2 ಎಕರೆಯಲ್ಲಿ ಶುಂಠಿ ಮತ್ತು 1 ಎಕರೆಯಲ್ಲಿ ಜೋಳ ಬೆಳೆದಿದ್ದರು. ಸುಮಾರು 4 ಲಕ್ಷ ಸಾಲ ಮಾಡಿಕೊಂಡಿದ್ದ ಮಂಜುನಾಥ್, ಸಾಲ ತೀರಿಸಲು ಸಾಧ್ಯವಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರದಲ್ಲಿ ಮತ್ತೊರ್ವ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಡವಾಗಿ ಬೆಳೆಕಿಗೆ ಬಂದಿದೆ. ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದಲ್ಲಿ 48 ವರ್ಷದ ಮಹಾದೇವಗೌಡ ಪಾಟೀಲ್ ಸಾಲ ಬಾಧೆಯಿಂದಾಗಿ 3 ದಿನಗಳ ಹಿಂದೆಯೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಬ್ಬಿನ ಜಮೀನಿನಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಾದೇವಗೌಡರ ಶವ ಪತ್ತೆಯಾಗಿದೆ. 6 ಲಕ್ಷ ರುಪಾಯಿ ಕೈಸಾಲ ಮಾಡಿಕೊಂಡಿದ್ದ ಮಹಾದೇವಗೌಡ ಸಾಲ ತೀರಿಸಲಾಗದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.