ವಿಧಾನಸಭೆ: ಹಲವು ದಿನಗಳ ಚರ್ಚೆ ಬಳಿಕ ಲೋಕಾಯುಕ್ತರ ನೇಮಕ ಮತ್ತು ಪದಚ್ಯುತಿ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆತಿದೆಯಾದರೂ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಹಾಲಿ ಲೋಕಾಯುಕ್ತ ವೈ.ಭಾಸ್ಕರ ರಾವ್ ವಜಾಕ್ಕೆ ಮಾತ್ರ ಇನ್ನಷ್ಟು ಕಾಲ ಕಾಯಬೇಕಿದೆ.
ಮಧ್ಯಾಹ್ನದ ಕಲಾಪ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಈ ವಿಧೇಯಕವನ್ನು ಸದನದಲ್ಲಿ ಮಂಡಿಸಿದರು. ಆದರೆ ಪದಚ್ಯುತಿಗೆ ಸರಳ ಬಹುಮತ ಸಾಕು ಎಂಬ ಪ್ರಸ್ತಾಪಕ್ಕೆ ಪಕ್ಷಭೇದ ಮರೆತು ವಿರೋಧ ವ್ಯಕ್ತವಾಯಿತು. ಹೀಗಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸದನ ಪ್ರಮುಖರ ಸಭೆಯಲ್ಲಿ ವಿಧಾನಮಂಡಲದ ಮೂರನೇ ಎರಡರಷ್ಟು ಸದಸ್ಯರ ಬಹುಮತದೊಂದಿಗೆ (150 ಸದಸ್ಯರ ಸಮ್ಮತಿ, ವಿಧಾನ ಪರಿಷತ್‍ನ 50 ) ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಪದಚ್ಯುತಿ ನಿರ್ಣಯ ತೆಗೆದುಕೊಳ್ಳಬಹುದು ಎಂಬ ಪರಿಷ್ಕರಣೆಯೊಂದಿಗೆ ವಿಧೇಯಕಕ್ಕೆ ಅಂಗೀಕಾರ ದೊರಕಿದೆ.
ಕುತೂಹಲಕಾರಿ ಸಂಗತಿ ಎಂದರೆ ತಿದ್ದುಪಡಿ ವಿಧೇಯಕದ ಮಂಡನೆ ಸಂದರ್ಭದಲ್ಲಿ ಇದ್ದ ಸಂಖ್ಯಾಬಲ ವಿಧೇಯಕಕ್ಕೆ ಒಪ್ಪಿಗೆ ದೊರೆಯುವ ಕಾಲಕ್ಕೆ 45ಕ್ಕೆ ಇಳಿದಿತ್ತು. ಪ್ರತಿಪಕ್ಷದ ಸಾಲಿನಲ್ಲಿ 20 ಆಡಳಿತ ಪಕ್ಷದ ಸಾಲಿನಲ್ಲಿ 25 ಸದಸ್ಯರಿದ್ದರು.
ಇನ್ನೊಂದು ಮಹತ್ವದ ಸಂಗತಿ ಎಂದರೆ ಲೋಕಾಯುಕ್ತವನ್ನು ನಿರಸನಗೊಳಿಸುವ ಮತ್ತು ದುರಾಡಳಿತದ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಕಸಿದುಕೊಳ್ಳುವ ಬಗ್ಗೆ ಸದನದಲ್ಲಿ ಮತ್ತು ಸದನ ಪ್ರಮುಖರ ಸಭೆಯಲ್ಲಿ ಪ್ರಸ್ತಾಪವಾಗಿದೆ. ಆದರೆ ಸದ್ಯಕ್ಕೆ ನೇಮಕ ಮತ್ತು ಪದಚ್ಯುತಿಗೆ ನಿರ್ಣಯಕ್ಕೆ ಮಾತ್ರ ಒಪ್ಪಿಗೆ ಕೊಡಲು ನಿರ್ಧರಿಸಲಾಗಿದೆಯಾದರೂ ಲೋಕಪಾಲ್ ಮಾದರಿಯಲ್ಲಿ ಸಮಗ್ರ ತಿದ್ದುಪಡಿಗೆ ಸರ್ಕಾರ ಪಟ್ಟುಹಿಡಿದಿದೆ.
ಭ್ರಷ್ಟಾಚಾರ ನಿಯಂತ್ರಣಕ್ಕೆ ಸೀಮಿತಗೊಳಿಸುವ ಪ್ರಸ್ತಾಪ:
ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಮಂಡಿಸಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಲೋಕಾಯುಕ್ತಕ್ಕೆ ಇರುವ ವಿಶೇಷ ಅಧಿಕಾರಗಳನ್ನು ಮೊಟಕುಗೊಳಿಸುವ ಬಗ್ಗೆ ಪ್ರಸ್ತಾಪಿಸಿದರು.
1988ರ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಲ್ಲಿ (ಪಿಸಿ ಆಕ್ಟ್ ) ಭ್ರಷ್ಟಾಚಾರ ಮತ್ತು ದುರಾಡಳಿತವನ್ನು ನಿಯಂತ್ರಿಸುವ ಎಲ್ಲ ಅಧಿಕಾರಗಳು ಇವೆ. ಸಾಮಾನ್ಯ ನೌಕರನಿಂದ ಮುಖ್ಯಮಂತ್ರಿಗಳವರೆಗೆ ಈ ಕಾಯಿದೆ ಪ್ರಕಾರ ತಪ್ಪೆಸಗಿದರೆ ಶಿಕ್ಷಿಸಲು ಅವಕಾಶವಿದೆ. ಹೀಗಾಗಿ ಲೋಕಾಯುಕ್ತಕ್ಕೆ ಈ ಕಿರು ತಿದ್ದುಪಡಿ ಒಂದೇ ಸಾಕೇ ಅಥವಾ ಸಮಗ್ರ ಬದಲಾವಣೆ ಬೇಕೇ ಎಂಬ ಬಗ್ಗೆ ಈ ಸದನ ಚರ್ಚೆ ಮಾಡಬೇಕಿದೆ. ಇದುವರೆಗಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಲೋಕಾಯುಕ್ತ ಕಾಯಿದೆಯ ಮೂಲ ಉದ್ದೇಶ ಸಾಧನೆಯಲ್ಲಿ ವಿಫಲವಾಗಿದ್ದೇವೆ ಎಂಬ ಅನುಮಾನ ಬರುತ್ತದೆ ಎಂದು ಹೇಳಿದರು. 1-1-1998ರಿಂದ 28-2-2015ರವರೆಗೆ ಲೋಕಾಯುಕ್ತದಲ್ಲಿ 595 ದಾಳಿ, 3582 ಟ್ರ್ಯಾಪ್ ಪ್ರಕರಣ ದಾಖಳಾಗಿದೆ. ಆದರೆ ಶಿಕ್ಷೆಯಾಗಿರುವುದು 510ಕ್ಕೆ ಮಾತ್ರ, 1638
ಮಂದಿ ಆರೋಪ ಮುಕ್ತರಾಗಿದ್ದಾರೆ. 31-3-2015ರವರೆಗೆ ಸೆಕ್ಷನ್ 12ರ ಪ್ರಕಾರ ಇಲಾಖಾ ವಿಚಾರಣೆಗೆ ಶಿಫಾರಸು ಮಾಡಿದ 4360 ಪ್ರಕರಣಗಳಲ್ಲಿ 925 ಜನಕ್ಕೆ ಮಾತ್ರ ಶಿಕ್ಷೆಯಾಗಿದೆ. 1149 ಮಂದಿಯ ವಿರುದ್ಧ ಆರೋಪ ಸಾಬೀತಾಗಿಲ್ಲ ಎಂದರು. ಈ ಎಲ್ಲದರ ಹಿನ್ನೆಲೆಯಲ್ಲಿ ಸಮಗ್ರ ತಿದ್ದುಪಡಿ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದರು.
ನಿರ್ಣಯ ಮಂಡನೆಯಾದರೆ ಲೋಕಾಯುಕ್ತರ ರೆಕ್ಕೆಪುಕ್ಕ ಕಟ್ :
ಈ ತಿದ್ದುಪಡಿ ವಿಧೇಯಕದ ಪ್ರಕಾರ ಒಮ್ಮೆ ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಪದಚ್ಯುತಿ ನಿರ್ಣಯ ವಿಧಾನಮಂಡಲದಲ್ಲಿ ಮಂಡನೆಯಾದ ತಕ್ಷಣ ಅವರ ಅಧಿಕಾರ ಮೊಟಕುಗೊಳ್ಳುತ್ತದೆ. ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರು ಅಧಿಕಾರ ನಡೆಸುವುದಕ್ಕೆ ಸಾಧ್ಯವಿಲ್ಲ. ವಿಧಾನ ಮಂಡಲದಲ್ಲಿ ಮಂಡನೆಯಾದ ನಿರ್ಣಯ ಇತ್ಯರ್ಥಗೊಳ್ಳುವವರೆಗೂ ಅವರ ಎಲ್ಲ ಹಕ್ಕು ಮತ್ತು ಕರ್ತವ್ಯಗಳು ತಡೆಹಿಡಿಯಲ್ಪಡುತ್ತದೆ. ಅಂದರೆ ಭಾಸ್ಕರ್ ರಾವ್ ಪದಚ್ಯುತಿ ನಿರ್ಣಯ ಮಂಡನೆಗೆ ಸರ್ಕಾರ ತಕ್ಷಣ ಇನ್ನೊಂದು ಅಧಿವೇಶನ ಕರೆದು ನಿರ್ಣಯ ಮಂಡನೆಯಾದಾಗ ಮಾತ್ರ ಇದು ಸಾಧ್ಯವಾಗುತ್ತದೆ.
ಲೋಕಾ ನಿರಸನಕ್ಕೆ ಪ್ರಸ್ತಾಪ:
ರಾಜ್ಯ ವಿಧಾನಸಭೆಯಲ್ಲಿ ಮತ್ತು ಸದನ ಪ್ರಮುಖರ ಸಭೆಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನೇ ನಿರಸನಗೊಳಿಸುವ ಬಗ್ಗೆ ಸರ್ಕಾರ ಪ್ರಸ್ತಾಪಿಸಿದೆ.ಲೋಕಾಯುಕ್ತರ ಪದಚ್ಯುತಿಗಾಗಿ ಈ ನಿರ್ಣಯ ಅನಿವಾರ್ಯ ಎಂಬುದು ಸರ್ಕಾರದ ವಾದ. ಆದರೆ ನಿರಸನಗೊಳಿಸಿದರೆ ಸಂಸ್ಥೆಯ ಕತೆ ಏನು ? ಎಂಬ ಬಗ್ಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಇದೊಂದು ಕಾರಣಕ್ಕೆ ಸಂಸ್ಥೆ ದುರ್ಬಲಗೊಳ್ಳುವುದು ಬೇಡ ಎಂಬುದು ಪ್ರತಿಪಕ್ಷಗಳ ಆಗ್ರಹ.
ಎಲ್ಲರೂ ಒಂದಾಗಿ ನ್ಯಾಯ ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಈ ವಿಚಾರದಲ್ಲಿ ಎಲ್ಲರೂ ಒಂದಾಗಿ ತೀರ್ಮಾನ ತೆಗೆದುಕೊಳ್ಳಿ. ಏನೇ ಮಾಡಿದರೂ ಸಮಯವಾಗುತ್ತದೆ. ಆದಷ್ಟು ಬೇಗ ಏನಾದರೂ ಮಾಡಿ ಈ ಶನಿಯನ್ನು ಹೊರಗೆ ಹಾಕಲು ಸಾಧ್ಯವಾ ? ಎಂಬ ಬಗ್ಗೆ ವಿಚಾರ ಮಾಡಿ.
ಕಾಗೋಡು ತಿಮ್ಮಪ್ಪ, ಸ್ಪೀಕರ್
ಇಂಥ ಮೊಂಡನನ್ನು ಎಲ್ಲಿಯೂ ನೋಡಿಲ್ಲ. ರಾಜ್ಯಕ್ಕೆ, ಶಾಸನಸಭೆಗೆ ಮತ್ತು ಸಾರ್ವಜನಿಕರಿಗೆ ಸವಾಲು ಒಡ್ಡುತ್ತಿರುವ ಲೋಕಾಯುಕ್ತರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ನಾವು ಒಂದು ರಿಸ್ಕ್ ತೆಗೆದುಕೊಳ್ಳೋಣ. ಜಸ್ಟೀಸ್ ರಾಜೇಂದ್ರ ಬಾಬು ಅವರ ಅಭಿಪ್ರಾಯದ ಪ್ರಕಾರ ಲೋಕಾಯುಕ್ತರ ಅಧಿಕಾರವನ್ನು ನಿರಸನಗೊಳಿಸುವ ತೀರ್ಮಾನ ತೆಗೆದುಕೊಳ್ಳೋಣ. ಆದರೆ ಲೋಕಾಯುಕ್ತ ಸಂಸ್ಥೆಯ ಅಧಿಕಾರವನ್ನು ಇನ್ನಷ್ಟು ಬಲಗೊಳಿಸೋಣ.
ಸುರೇಶ್ ಕುಮಾರ್, ಮಾಜಿ ಕಾನೂನು ಸಚಿವರು
ಲೋಕಾಯುಕ್ತರ ಪದಚ್ಯುತಿಗೆ ಗೋವಾ ಮಾದರಿಯೇ ಸೂಕ್ತ. ಈ ನಿರ್ಣಯ ತೆಗೆದುಕೊಳ್ಳುವುದಕ್ಕೆ ಸದನವೇ ಬೇಕಿಲ್ಲ. ನೇಮಕ ಮಾಡಿದ ಸಮಿತಿಯೇ ನಿರ್ಣಯ ತೆಗೆದುಕೊಳ್ಳಬಹುದು.
ಬಸವರಾಜ ರಾಯರೆಡ್ಡಿ
ಲೋಕಾಯುಕ್ತರ ಪದಚ್ಯುತಿ ಬಗ್ಗೆ ಮಾತ್ರ ಚರ್ಚಿಸುವ ಬದಲು ಸಂಸ್ಥೆಯ ಸಮಗ್ರ ತಪ್ಪು-ಒಪ್ಪುಗಳ ಬಗ್ಗೆ ಮಾತಾಡೋಣ. ಲೋಕಾಯುಕ್ತ ಸಂಸ್ಥೆಯನ್ನೇ ನಿರಶನಗೊಳಿಸಿ. ಸದನದ ಸಾರ್ವಭೌಮತೆ ಎತ್ತಿ ಹಿಡಿಯಲು ವಿಶೇಷ ಕಲಾಪ ಕರೆಯಿರಿ. ಹೀಗಾದರೆ ಹೇಗೆ ? ಹಾಗಾದರೆ ಹೇಗೆ ? ಎಂಬ ಒಳ ಲೆಕ್ಕಾಚಾರವನ್ನು ಬಿಡಿ.
ರಮೇಶ್ ಕುಮಾರ್