ನಡುರಾತ್ರಿಯಲ್ಲಿ ಭಾರತ-ಬಾಂಗ್ಲಾ ಭೂ ಬದಲಾವಣೆ
ಶುಕ್ರವಾರ ಮಧ್ಯರಾತ್ರಿ ಸಾವಿರಾರು ಜನರ ಜೀವನದಲ್ಲಿ ಹೊಸ ಉತ್ಸಾಹ. ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಢಾಕಾ ತೆರಳಿದ್ದಾಗ ಒಪ್ಪಂದವಾಗಿದ್ದ
ದಿನ್ಹತ(ಭಾರತ-ಬಾಂಗ್ಲಾ ಗಡಿ): ಶುಕ್ರವಾರ ಮಧ್ಯರಾತ್ರಿ ಸಾವಿರಾರು ಜನರ ಜೀವನದಲ್ಲಿ ಹೊಸ ಉತ್ಸಾಹ. ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಢಾಕಾ ತೆರಳಿದ್ದಾಗ ಒಪ್ಪಂದವಾಗಿದ್ದ ಗಡಿ ಭೂಪ್ರದೇಶ ಒಪ್ಪಂದದ ಪ್ರಕಾರು ಹಲವಾರು ಜನರು ಭಾರತೀಯ ನಿವಾಸತ್ವವನ್ನು ಒಪ್ಪಿಕೊಂಡರು.
ಮೋದಿ ಮತ್ತು ಬಾಂಗ್ಲ ಪ್ರಧಾನಿ ಶೇಕ್ ಹಸೀನಾ ಸಹಿ ಮಾಡಿದ್ದ ಈ ಒಪ್ಪಂದದ ಪ್ರಕಾರ ಭಾರತಕ್ಕೆ ಸೇರಿದ ೧೭೧೬೦ ಎಕರೆಯ ೧೧೧ ಭೂಪ್ರದೇಶಗಳನ್ನು ಬಾಂಗ್ಲಾದೇಶಕ್ಕೂ, ಹಾಗೂ ಇದಕ್ಕೆ ಪ್ರತಿಯಾಗಿ ಬಾಂಗ್ಲಾ ೭೧೧೦ ಎಕರೆ ಜಾಗವುಳ್ಳ ೫೧ ಭೂಪ್ರದೇಶಗಳನ್ನು ಭಾರತಕ್ಕೂ ನೀಡುವುದಾಗಿ ಒಪ್ಪಂದವಾಗಿತ್ತು. ಇದು ವಿಶ್ವದಲ್ಲೇ ಅತಿ ದೊಡ್ಡ ಭೂ ಬದಲಾವಣೆ ಎಂದು ಬಣ್ಣಿಸಲಾಗಿತ್ತು.
ಎ ಪಿ ಜೆ ಅಬ್ದುಲ್ ಕಲಾಮ್ ಅವರ ನೆನಪಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಭಾರತದಲ್ಲಿರುವ ಬಾಂಗ್ಲಾದೇಶಿ ಆವೃತ ಭೂಪ್ರದೇಶದ ೧೪,೨೧೫ ಜನ ಅವರ ದೇಶದಲ್ಲಿ ಉಳಿಯದೆ ಭಾರತೀಯ ನಾಗರಿಕತ್ವವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಬಾಂಗ್ಲಾದೇಶದಲ್ಲಿರುವ ಭಾರತ ಆವೃತ ಭೂಪ್ರದೇಶದ ೩೭೩೬೯ ಭಾರತೀಯರಲ್ಲಿ ಕೇವಲ ೯೭೯ ಜನ ಮಾತ್ರ ಭಾರತೀಯ ನಾಗರಿಕತ್ವವನ್ನು ಅಪೇಕ್ಷಿಸಿದ್ದು ಉಳಿದವರು ಬಾಂಗ್ಲಾ ನಿವಾಸತ್ವಕ್ಕೆ ಒಪ್ಪಿಕೊಂಡಿದ್ದಾರೆ.
ಕಳೆದ ೬೮ ವರ್ಷಗಳಿಂದ ಭಾರತ ಮತ್ತು ಬಾಂಗ್ಲಾದೇಶ ಆವೃತ ಭೂಪ್ರದೇಶಗಳಲ್ಲಿ ಹಲವಾರು ಜನ ಯಾವುದೇ ದಾಖಲೆಗಳಿಲ್ಲದೆ ಬದುಕುತ್ತಿದ್ದು, ಮೂಲ ಸೌಕರ್ಯಗಳಿಂದ ವಂಚಿತರಾಗಿ ಬದುಕುತ್ತಿದ್ದಾರೆ.