ನವದೆಹಲಿ: ಮುಂಗಾರು ಮಳೆಯು ಜೂ.5ಕ್ಕೆ ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಹಿಂದೆ ಜೂ.1ರಂದೇ ಮುಂಗಾರು ಮಾರುತ ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿತ್ತು. ಆದರೆ, ಶ್ರೀಲಂಕಾ ತಲುಪಿದ ಬಳಿಕ ಮುಂಗಾರು ಮಾರುತದ ಚಲನೆ ನಿಧಾನಗೊಂಡಿತ್ತು. ಸದ್ಯ ಜೂ.5ರಂದು ಮುಂಗಾರು ಪ್ರವೇಶಿಸಲು ಪೂರಕವಾದ ವಾತಾವರಣ ಸೃಷ್ಟಿಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕಳೆದ ವರ್ಷವೂ ಮುಂಗಾರು ಪ್ರವೇಶ ವಿಳಂಬವಾಗಿತ್ತು. ಹವಾಮಾನ ಇಲಾಖೆಯ ಮುನ್ಸೂಚನೆ ಹೊರತಾಗಿಯೂ ಮುಂಗಾರು ಜೂ.6ರಂದು ಕೇರಳಕ್ಕೆ ಕಾಲಿಟ್ಟಿತ್ತು.
ಯಾವ ಪ್ರದೇಶಗಳಿಗೆ ಹೆಚ್ಚು ಭೀತಿ?
ದೆಹಲಿ, ಹರ್ಯಾಣ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ. ಇಲ್ಲಿ ಶೇ.85ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಕಳೆದ ವರ್ಷವೂ ಈ ಪ್ರದೇಶಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿತ್ತು.
"ಪ್ರತಿ ಬಾರಿ ನಾವು ನೀಡಿದ ಮುನ್ಸೂಚನೆ ಸರಿಯಾಗಿರಲಿ ಎಂದು ಭಾವಿಸುತ್ತೇವೆ. ಆದರೆ ಈ ಬಾರಿ ಮುನ್ಸೂಚನೆ ಸುಳ್ಳಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಬೇಕಾಗಿದೆ.
-ಹರ್ಷವರ್ಧನ್,
ಕೇಂದ್ರ ಭೂವಿಜ್ಞಾನ ಸಚಿವ
ಈಗಾಗಲೇ ಸಂಕಷ್ಟಕ್ಕೀಡಾಗಿರುವ ರೈತ ಸಮುದಾಯಕ್ಕೆ ಇದೊಂದು ಕಹಿ ಸುದ್ದಿ. ಕಳೆದ ವರ್ಷವೂ ಮಳೆ ಕೊರತೆ ಹಾಗೂ ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾಯಿತು. ಈ ವರ್ಷ ಬರ ಬಂದರೆ ಅವರ ಸಮಸ್ಯೆಗಳು ದ್ವಿಗುಣವಾಗುತ್ತದೆ. ಅಗತ್ಯ ವಸ್ತುಗಳ ದರವೂ ಏರಿಕೆಯಾಗುತ್ತದೆ.
-ಹರೀಶ್ ಗಾಲಿಪೆಲ್ಲಿ, ಮುಖ್ಯಸ್ಥ, ಕಮಾಡಿಟೀಸ್ ಆ್ಯಂಡ್ ಕರೆನ್ಸೀಸ್, ಇಂಡಿಟ್ರೇಡ್ ಡಿರೈವೇಟಿವ್ಸ್ ಆ್ಯಂಡ್ ಕಮಾಡಿಟೀಸ್.