ಬೆಂಗಳೂರು: ಕಾವೇರಿ ನದಿಯನ್ನು ಕರ್ನಾಟಕ ಕಲುಷಿತಗೊಳಿಸುತ್ತಿದೆ ಎಂದು ಆರೋಪಿಸಿರುವ ತಮಿಳುನಾಡಿಗೆ ರಾಜ್ಯಸರ್ಕಾರ ಕಾನೂನು ಮೂಲಕವೇ ಉತ್ತರ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಕಾವೇರಿ ನದಿಗೆ ಕರ್ನಾಟಕ, ಕೈಗಾರಿಕಾ ತ್ಯಾಜ್ಯವನ್ನು ಹರಿಸುತ್ತಿದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವುದಕ್ಕೆ ತಮಿಳುನಾಡು ಸಚಿವ ಸಂಪುಟ ತೀರ್ಮಾನಿಸಿದೆ. ಈ ವಿಚಾರದಲ್ಲಿ ತಮಿಳುನಾಡು ಕೋರ್ಟ್ ಮೊರೆ ಹೋಗುವುದಿದ್ದರೆ ನಾವೂ ಹೋಗುತ್ತೇವೆ. ತಮಿಳುನಾಡಿಗೆ ಕಾನೂನು ಮೂಲಕವೇ ಉತ್ತರ ನೀಡುತ್ತೇವೆ ಎಂದರು.
ಸರೋವರ ಸಂರಕ್ಷಣೆ ಕಾಯ್ದೆ ಜಾರಿ:
ಹತ್ತಿ ಗಿಡಕ್ಕೆ ನೀರೆರೆಯುವ ಮೂಲಕ ಪರಿಸರ ದಿನ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆರೆಗಳ ರಕ್ಷಣೆಗಾಗಿ ಸರ್ಕಾರ ರೂಪಿಸಿದ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ ಶುಕ್ರವಾರದಿಂದಲೇ ಜಾರಿಯಾಗಲಿದೆ. ಈ ಕಾಯ್ದೆ ಮೂಲಕ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆರೆಗಳಿಗೆ ತ್ಯಾಜ್ಯ ನೀರು ಹರಿಸುವುದನ್ನು ತಡೆಯಲಾಗುತ್ತದೆ. ಹಾಗೆಯೇ ಕೆರೆ ಅಚ್ಚುಕಟ್ಟು ಸಂರಕ್ಷಣೆ ಮತ್ತು ಕೆರೆಗಳಿಗೆ ಶುದ್ಧ ನೀರು ಸಂಗ್ರಹವಾಗುವಂತೆ ಮಾಡಲಾಗುತ್ತದೆ ಎಂದರು.
ಕಾವೇರಿಯಷ್ಟೇ ಅಲ್ಲ. ಬಂಗಾಳಕೊಲ್ಲಿ ಕೂಡ ಕಲುಷಿತವಾಗಬಾರದು. ಪ್ರತಿಯೊಬ್ಬರೂ ಅವರ ವ್ಯಾಪ್ತಿಯಲ್ಲಿ ಕಾಳಜಿ ವಹಿಸಬೇಕು. ಸಮುದ್ರ ಕಲುಷಿತವಾಗಬಾರದೆನ್ನುವುದು ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿಚಾರ.
-ಕೆ.ಜೆ.ಜಾರ್ಜ್, ಗೃಹ ಸಚಿವ