ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ನಿನ್ನೆ ಕಾಣಿಸಿಕೊಂಡ ಬೆಂಕಿಗೆ ಅತಿಯಾದ ಕೈಗಾರಿಕಾ ತ್ಯಾಜ್ಯ ಪದಾರ್ಥಗಳೇ ಕಾರಣ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ಹೇಳಿದ್ದಾರೆ.
ಕೆರೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ತ್ಯಾಜ್ಯ ಸಂಗ್ರಹವಾಗಿದೆ. ಇದರಿಂದಾಗಿ, ನೊರೆ ಉತ್ಪತ್ತಿಯಾಗಿದ್ದು ಬೆಂಕಿ ಹತ್ತಿಕೊಂಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಬೆಂಗಳೂರಿನ ವರ್ತೂರು, ಬೆಳ್ಳಂದೂರು, ಯಮಲೂರು ಮೊದಲಾದ ಕೆರೆಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ಕೈಗಾರಿಕಾ ತ್ಯಾಜ್ಯಗಳು ಬಂದು ಸೇರಿ ನೊರೆ ಉತ್ಪತ್ತಿ ಮಾಡುತ್ತವೆ.ಮಾಲಿನ್ಯಕಾರಕಗಳು ಸಂಚಯಗಳು ಕೆರೆಗಳ ತಳದಲ್ಲಿ ನಿಂತು ಬಲವಾದ ಗಾಳಿ, ಮಳೆ ಬರುವಾಗ ದಟ್ಟ ನೊರೆ ಸೃಷ್ಟಿಸುತ್ತವೆ ಎಂದು ಜೀವ ವಿಜ್ಞಾನ ಕೇಂದ್ರದ ಮುಖ್ಯ ಲೇಖಕ ಪ್ರೊ.ಟಿ.ವಿ.ರಾಮಚಂದ್ರ ಹೇಳುತ್ತಾರೆ.
ಅವರು ನಡೆಸಿರುವ ಅಧ್ಯಯನದಲ್ಲಿ ಈ ರೀತಿ ವಿವರಿಸಿದ್ದು, ಕೆರೆ. ನೀರಿನಲ್ಲಿ ಕೈಗಾರಿಕಾ ತ್ಯಾಜ್ಯ ಮತ್ತು ಫಾಸ್ಪೇಟ್ ಮಿಶ್ರಣಗೊಂಡು ಬೆಂಕಿ ಹತ್ತಿಕೊಳ್ಳುತ್ತದೆ. ಬೆಂಗಳೂರಿನ ಕೆರೆಗಳ ನೊರೆ ಸಮಸ್ಯೆ ಇಂದು, ನಿನ್ನೆಯದಲ್ಲ, ಕಳೆದ 10 ವರ್ಷಗಳಿಂದ ಇದೆ, ಬೆಂಕಿ ಹತ್ತಿಕೊಂಡದ್ದರಿಂದ ಎಲ್ಲರ ಗಮನ ಸೆಳೆದಿದೆ. ಕೆರೆಗಳ ಸರಿಯಾದ ನಿರ್ವಹಣೆಯಿಲ್ಲದೆ ಈ ರೀತಿ ಆಗುತ್ತದೆ ಎಂದು ಅವರು ಹೇಳಿದ್ದಾರೆ.
ಒಂದು ವರದಿ ಪ್ರಕಾರ, ಬೆಂಗಳೂರಿನ ಪ್ರಮುಖ ಮೂರು ಕೆರೆಗಳಾದ ವರ್ತೂರು, ಬೆಳ್ಳಂದೂರು ಮತ್ತು ಚಲ್ಲಘಟ್ಟಗಳಿಗೆ ಪ್ರತಿದಿನ 500 ದಶಲಕ್ಷ ಲೀಟರ್ ತ್ಯಾಜ್ಯ ನೀರು ಬಿಡುಗಡೆಯಾಗುತ್ತದೆ. ಮಾಧ್ಯಮಗಳು, ಪರಿಸರ ತಜ್ಞರು, ಜೀವಶಾಸ್ತ್ರಜ್ಞರು ಈ ಬಗ್ಗೆ ತಮ್ಮ ಕಳಕಳಿಯನ್ನು ವ್ಯಕ್ತಪಡಿಸುತ್ತಿದ್ದರೂ ಮಹಾನಗರ ಪಾಲಿಕೆ ತುರ್ತು ಕ್ರಮ ಕೈಗೊಂಡಿಲ್ಲ. ತ್ಯಾಜ್ಯ ನೀರು ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಾ. ರಾಮಚಂದ್ರ ಒತ್ತಾಯಿಸಿದ್ದಾರೆ.