ನವದೆಹಲಿ: ದೇಶದಲ್ಲಿ ತುರ್ತು ಪರಿಸ್ಥಿತಿಗೆ 6 ತಿಂಗಳು ಮುಂಚಿತವಾಗಿಯೇ ಸಿದ್ಧತೆ ನಡೆಸಲಾಗಿತ್ತು. ಅಷ್ಟೇ ಅಲ್ಲ, ರಾಜಕೀಯ ವೈರಿಗಳ ಸಾಮೂಹಿಕ ಬಂಧನಕ್ಕೆ, ಮೂಲಭೂತ ಹಕ್ಕುಗಳ ಕಸಿಯುವಿಕೆಗೆ ವೇದಿಕೆಯೂ ಸಿದ್ಧವಾಗಿತ್ತು. ಇಂತಹುದೊಂದು ಅಚ್ಚರಿಯ ಮಾಹಿತಿ ಈಗ ಬಹಿರಂಗವಾಗಿದೆ.
ತುರ್ತು ಪರಿಸ್ಥಿತಿ ಹೇರುವುದಕ್ಕೆ 6 ತಿಂಗಳ ಮುಂಚೆ ಅಂದರೆ 1975ರ ಜ.8ರಂದು ಅಂದಿನ ಪಶ್ಚಿಮಬಂಗಾಳ ಮುಖ್ಯಮಂತ್ರಿ ಸಿದ್ಧಾರ್ಥ ಶಂಕರ್ ರೇ ಅವರು ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಬರೆದ ರಹಸ್ಯ ಪತ್ರವು ಈ ಎಲ್ಲ ವಿಚಾರಗಳನ್ನು ಬಹಿರಂಗ ಪಡಿಸಿದೆ ಎಂದು ಕೃತಿಯೊಂದರಲ್ಲಿ ಉಲ್ಲೇಖಿಸಲಾಗಿದೆ. ದಿ ಇಂಡಿಯನ್ ಎಕ್ಸ್‍ಪ್ರೆಸ್‍ನ ಹಿರಿಯ ಪತ್ರಕರ್ತೆ ಕೂಮಿ ಕಪೂರ್ ಅವರು ಬರೆದಿರುವ `ದಿ ಎಮರ್ಜೆನ್ಸಿ- ಎ ಪರ್ಸನಲ್ ಹಿಸ್ಟರಿ' ಎಂಬ ಕೃತಿಯಲ್ಲಿ ತುರ್ತು ಪರಿಸ್ಥಿತಿಯ ಹಲವು ಅಂಶಗಳನ್ನು ಉಲ್ಲೇಖಿಸಲಾಗಿದೆ. ತುರ್ತು ಪರಿಸ್ಥಿತಿ ಹೇರುವುದಕ್ಕೆ 6 ತಿಂಗಳ ಮುಂಚೆಯೇ ಇಂದಿರಾಗಾಂಧಿ ಅವರು ಎಲ್ಲ ಸಿದ್ಧತೆಗಳನ್ನು ನಡೆಸಿದ್ದರು. ರೇ ಅವರು ತಮ್ಮ ಕೈಬರಹದಲ್ಲೇ ಬರೆದ `ಕಾರ್ಯಯೋಜನೆ'ಯ ಕರಡು ಪ್ರತಿಯಿಂದ ಈ ಎಲ್ಲ ವಿವರ ಸಿಕ್ಕಿದೆ ಎಂದು ಕಪೂರ್ ತಮ್ಮ ಕೃತಿಯಲ್ಲಿ ತಿಳಿಸಿದ್ದಾರೆ. ಪೆಂಗ್ವಿನ್ ಬುಕ್ಸ್ ಇಂಡಿಯಾ ಪ್ರಕಟಿಸಿದ ಈ ಕೃತಿಯು ತುರ್ತು ಪರಿಸ್ಥಿತಿಗೆ 40 ವರ್ಷ ತುಂಬುವ ಸಂದರ್ಭದಲ್ಲೇ ಬಿಡುಗಡೆಯಾಗಲಿದೆ. ಎಮರ್ಜೆನ್ಸಿಗೆ ಸಂಬಂಧಿಸಿ ಪ್ರತಿಪಕ್ಷಗಳ ಪ್ರತಿಕ್ರಿಯೆ, ಸುಬ್ರಮಣಿಯನ್ ಸ್ವಾಮಿ, ಜಾರ್ಜ್ ಫರ್ನಾಂಡಿಸ್, ಆಗಿನ ಆರೆಸ್ಸೆಸ್ ಪ್ರಚಾರಕರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳೂ ಕೃತಿಯಲ್ಲಿ ಒಳಗೊಂಡಿವೆ ಎಂದು ಇಂಡಿಯನ್ ಎಕ್ಸ್‍ಪ್ರೆಸ್ ವರದಿ ಮಾಡಿದೆ.
ಆರೆಸ್ಸೆಸ್ ಸದಸ್ಯರ ಹೆಸರು ಪಟ್ಟಿ ಮಾಡಿ: ಯಾರ್ಯಾರನ್ನು ಬಂಧಿಸಬೇಕು, ಏನೇನು ಮಾಡಬೇಕು ಎಂಬುದನ್ನು ತುರ್ತು ಪರಿಸ್ಥಿತಿ ಘೋಷಿಸುವ ಮೊದಲೇ ನಿರ್ಧರಿಸಲಾಗಿತ್ತು. ``ಪ್ರತಿಯೋಬ್ಬ ಕಾಂಗ್ರೆಸ್ ಮುಖ್ಯಮಂತ್ರಿಗೂ ಗೋಪ್ಯ ಟೆಲೆಕ್ಸ್ ಸಂದೇಶ ಕಳುಹಿಸಿ. ಆನಂದ್ ಮಾರ್ಗ್ ಮತ್ತು ಆರೆಸ್ಸೆಸ್‍ನ ಪ್ರಮುಖರ ಹೆಸರನ್ನು ಪಟ್ಟಿ ಮಾಡುವಂತೆ ಸೂಚಿಸಿ. ಸಂದೇಶದಲ್ಲಿ ಎಲ್ಲೂ ತುರ್ತು ಪರಿಸ್ಥಿತಿಯ ಬಗ್ಗೆ ಸುಳಿವು ನೀಡಬೇಡಿ. 24 ಗಂಟೆಗಳೊಳಗೆ ಎಲ್ಲವೂ ಸಿದ್ಧವಾಗಲಿ'' ಎಂದು ಇಂದಿರಾರಿಗೆ ಬರೆದ ಟಿಪ್ಪಣಿಯಲ್ಲಿ ರೇ ತಿಳಿಸಿದ್ದರು. ಅಷ್ಟೇ
ಅಲ್ಲ, ``ಅಧ್ಯಾದೇಶಕ್ಕೆ ಸಹಿ ಹಾಕಲು ರಾಷ್ಟ್ರಪತಿ ಸಿಗುತ್ತಾರೆ. ನಾಳೆ ಬೆಳಗ್ಗೆ ಅಥವಾ ರಾತ್ರಿ, ತಪ್ಪಿದರೆ ನಾಡಿದ್ದು ಮುಂಜಾನೆ ವಿಶೇಷ ಸಂಪುಟ ಸಭೆಯನ್ನು ಕರೆಯಬೇಕು'' ಎಂದೂ ಅವರು ಸಲಹೆ ನೀಡಿದ್ದರು. ಈ ವಿಚಾರವನ್ನು ತಮ್ಮ ಕೃತಿಯಲ್ಲಿ ಪ್ರಕಟಿಸಿರುವ ಕಪೂರ್ ಅವರು, ಅಂದು ನಡೆದ ಸಭೆಯಲ್ಲಿ ರೇ, ಕಾನೂನು ಸಚಿವ ಎಚ್.ಆರ್. ಗೋಖಲೆ, ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಬರುವಾ, ರಜಿನಿ ಪಟೇಲ್ ಮತ್ತಿತರರು ಪಾಲ್ಗೊಂಡಿದ್ದರು ಎಂಬುದನ್ನೂ ತಿಳಿಸಿದ್ದಾರೆ. ಒಟ್ಟಿನಲ್ಲಿ ತುರ್ತು ಪರಿಸ್ಥಿತಿಯ ನೈಜ ಅನುಷ್ಠಾನ ಆಗಿದ್ದು, ರೇ ಅವರ ಕ್ರಿಯಾ ಯೋಜನೆಯ ಪತ್ರ ಸಿಕ್ಕ ಬಳಿಕವೇ ಎಂದೂ ಅವರು ಹೇಳಿದ್ದಾರೆ.
ಸ್ವಾಮಿ ಆನ್ ದ ರನ್: ಕೃತಿಯ `ಸ್ವಾಮಿ ಆನ್ ದರನ್' ಎಂಬ ಅಧ್ಯಾಯದಲ್ಲಿ ಅಂದಿನ ಜನಸಂಘದ ಸಂಸದ ರಾಜ್ಯಸಭೆಯಲ್ಲಿ ಅಚ್ಚರಿ ರೀತಿ ಪ್ರತ್ಯಕ್ಷವಾದದ್ದು ಮತ್ತು ಎಲ್ಲರ ಕಣ್ಣುತಪ್ಪಿಸಿ ಗುಜರಾತ್‍ಗೆ ಹೋದ ಪ್ರಸಂಗವನ್ನು ವಿವರಿಸಲಾಗಿದೆ. ಆಗ ಗುಜರಾತ್‍ನಲ್ಲಿ ಸ್ವಾಮಿ ಅವರನ್ನು ಹುಡುಕಿ ಕರೆತಂದಿದ್ದು ಆಗಿನ ಯುವ ಪ್ರಚಾರಕ ನರೇಂದ್ರ ಮೋದಿ ಎಂಬುದನ್ನೂ ಉಲ್ಲೇಖಿಸಿದ್ದಾರೆ ಕಪೂರ್.