ಪ್ರಧಾನ ಸುದ್ದಿ

ರಾಜ್ಯದ 6 ವಿವಿಗಳಿಗೆ ಕುಲಪತಿಗಳ ನೇಮಕ

Srinivasamurthy VN

ಬೆಂಗಳೂರು: ರಾಜ್ಯದ ಆರು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಸೋಮವಾರ ಸಂಜೆ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಆರ್.ವಿ. ದೇಶಪಾಂಡೆಯವರು ರಾಜ್ಯಪಾಲ ವಿ.ಆರ್. ವಾಲ ಅವರನ್ನು ಭೇಟಿಯಾಗಿ ಚರ್ಚಿಸಿದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ. ಕರ್ನಾಟಕ ವಿವಿ- ಪ್ರೊ. ಪ್ರಮೋದ್ ಬಿ.ಗಾಯಿ, ರಾಣಿ ಚನ್ನಮ್ಮ ವಿವಿ- ಡಾ. ಹೊಸ್ಮನಿ ಎಸ್.ಬಿ., ಗುಲ್ಬರ್ಗ ವಿವಿ- ಡಾ.ನಿರಂಜನ ಎಸ್.ಆರ್., ಕುವೆಂಪು ವಿವಿ-ಪ್ರೊ.ಜೋಗನ್ ಶಂಕರ್, ವಿಜಯನಗರ ಶ್ರೀಕೃಷ್ಣದೇವ ರಾಯ ವಿವಿ- ಡಾ.ಸುಭಾಷ್ ಎಂ.ಎಸ್., ಕರ್ನಾಟಕ ಸಂಸ್ಕೃತ ವಿವಿ- ಪ್ರೊ. ಪದ್ಮಾ ಶೇಖರ್ ನೇಮಕಗೊಂಡ ಕುಲಪತಿಗಳು.

ನೇಮಕವೇ ವಿವಾದವಾಗಿತ್ತು
ಈ ಆರು ವಿಶ್ವವಿದ್ಯಾಲಯಗಳ ಕುಲಪತಿಗಳ ಸೇವಾ ಅವಧಿ ಒಂದು ವರ್ಷದ ಹಿಂದೆಯೇ ಅಂತ್ಯಗೊಂಡ ಹಿನ್ನಲೆಯಲ್ಲಿ ಪ್ರಭಾರ ಕುಲಪತಿಗಳನ್ನು ನೇಮಿಸಲಾಗಿತ್ತು. ಕುಲಪತಿಗಳ ಆಯ್ಕೆಗಾಗಿ ರಚನೆಯಾಗಿದ್ದ ಶೋಧನಾ ಸಮಿತಿ ಸಲ್ಲಿಸಿದ್ದ ಪಟ್ಟಿಯನ್ನು ಸರ್ಕಾರ ರಾಜ್ಯಪಾಲರಿಗೆ ಸಲ್ಲಿಸಿತ್ತು. ಆದರೆ, ಇದಕ್ಕೆ ರಾಜಭವನದಿಂದ ಆಕ್ಷೇಪ ವ್ಯಕ್ತವಾಗಿತ್ತು. ಜೊತೆಗೆ ಸ್ಪಷ್ಟೀಕರಣವನ್ನೂ ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಗ್ಗೆ ಕ್ರಮಕೈಗೊಳ್ಳುವುದಾಗಿ ಹೇಳಿದ್ದರು. ಅಲ್ಲದೇ, ಉನ್ನತ ಶಿಕ್ಷಣ ಸಚಿವ ದೇಶಪಾಂಡೆಯವರು ಈ ಕುರಿತಾಗಿ ಸರ್ಕಾರ ತನ್ನ ಪಾಲಿನ ಕೆಲಸ ಮುಗಿಸಿದೆ.

ಸರ್ಕಾರ ವಿಳಂಬ ಮಾಡಿಲ್ಲ, ಎರಡೂವರೆ ತಿಂಗಳ ಹಿಂದೆಯೇ ರಾಜ್ಯಪಾಲರಿಗೆ ಅರ್ಹರ ಪಟ್ಟಿ ಕಳುಹಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಮವಾರ ಸಂಜೆ ರಾಜಭವನಕ್ಕೆ ಭೇಟಿ ನೀಡಿ ಸುಮಾರು ಎರಡು ತಾಸುಗಳಿಗೂ ಹೆಚ್ಚು ರಾಜ್ಯಪಾಲ ವಿ.ಆರ್. ವಾಲ ಅವರೊಂದಿಗೆ ಸಮಾಲೋಚನೆ ನಡೆಸಿದರು. ವಿವಿ ಕುಲಪತಿಗಳ ನೇಮಕಕ್ಕೆಸಂಬಂಧಪಟ್ಟಂತೆ ರಾಜ್ಯಪಾಲರು ಕೇಳಿದ ವಿವರಗಳಿಗೆ ಸ್ಪಷ್ಟವಾದ ಮಾಹಿತಿ ಒದಗಿಸಿದರು. ಇದಾದ ಕೆಲವೇ ಗಂಟೆಗಳಲ್ಲಿ ರಾಜಭವನದಿಂದ ಆರು ವಿವಿಗಳಿಗೆ ಕುಲಪತಿಗಳನ್ನು ನೇಮಕ ಮಾಡಿದ ಆದೇಶ ಹೊರಬಿದ್ದಿತು.

SCROLL FOR NEXT