ನವದೆಹಲಿ: ಆಮ್ ಆದ್ಮಿ ಪಕ್ಷದ ಯುವ ಘಟಕದ ಸುಮಾರು ೧೫೦ ಸದಸ್ಯರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಮಾಜಿ ಐಪಿಲ್ ನಿರ್ದೇಶಕ ಲಲಿತ್ ಮೋದಿ ಅವರ ಪ್ರವಾಸ ದಾಖಲೆಗಳಿಗೆ ಸಹಾಯ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಎಎಪಿ ದೆಹಲಿ ಯುವ ಘಟಕದ ಅಧ್ಯಕ್ಷ ಅಂಕುಶ್ ಗಾರ್ಗ್ ಅವರ ನೇತೃತ್ವದಲ್ಲಿ ಸಚಿವೆಯವರ ನವದೆಹಲಿಯ ಗೃಹದ ಹೊರಗೆ ಬೆಳಗ್ಗೆ ೧೦ ಘಂಟೆಗೆ ಈ ಪ್ರತಿಭಟನೆ ನಡೆದಿದೆ. ತಮ್ಮ ಪತ್ನಿಯ ಕ್ಯಾನ್ಸರ್ ಚಿಕಿತ್ಸೆಗೆ ಪೋರ್ಚುಗಲ್ ತೆರಳಲು ಲಲಿತ್ ಮೋದಿ ಅವರ ಪ್ರವಾಸಕ್ಕೆ ದಾಖಲೆಗಳನ್ನು ಶೀಘ್ರವಾಗಿ ಒದಗಿಸಲು ಸುಷ್ಮಾ ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಇದರ ವಿರುದ್ಧ ಘೋಷಣೆಗಳನ್ನು ಕೂಗಲಾಗಿದೆ.
ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿದ್ದು, ಕಾನೂನನ್ನು ಮುರಿದರೆ ಪ್ರತಿಭಟನಕಾರರನ್ನು ಬಂಧಿಸಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
"ಸದ್ಯಕ್ಕೆ ಪ್ರತಿಭಟನೆ ಶಾಂತಿಯುತವಾಗಿದ್ದು, ನಾವು ಪ್ರತಿಭಟನಕಾರರ ಜೊತೆ ಸಂಧಾನ ನಡೆಸಲು ಪ್ರಯತ್ನಿಸುತ್ತಿದೇವೆ. ಪ್ರತಿಭಟನೆ ನಿಲ್ಲಿಸಲು ಕೇಳಿಕೊಂಡಿದ್ದೇವೆ. ಅಗತ್ಯ ಬಿದ್ದರೆ ಅವರನ್ನು ಬಂಧಿಸಲಾಗುವುದು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.