ಪ್ರಧಾನ ಸುದ್ದಿ

600 ರು. ಲಂಚ ಪಡೆದಿದ್ದಕ್ಕೆ 7 ವರ್ಷ ಜೈಲು..!

Srinivasamurthy VN

ಬೀದರ್: ಕೇವಲ 600 ರು. ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದ ಸರ್ಕಾರಿ ನೌಕರನೊಬ್ಬನಿಗೆ ಮಂಗಳವಾರ ಲೋಕಾಯುಕ್ತ ನ್ಯಾಯಾಲಯ 7 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಲಂಚ ಪಡೆದು ತಮ್ಮ ಜೇಬು ತುಂಬಿಸಿಕೊಳ್ಳು ಸರ್ಕಾರಿ ಭ್ರಷ್ಟ ಅಧಿಕಾರಿಗಳಿಗೆ ಕರ್ನಾಟಕ ಲೋಕಾಯುಕ್ತ ನ್ಯಾಯಾಲಯ ಕೆಂಗಣ್ಣು ಬೀರಿದ್ದು, ಕೇವಲ 600 ರು. ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದ ಬೀದರ್ ನ ಗ್ರಾಮ ಲೆಕ್ಕಿಗನೊಬ್ಬನಿಗೆ 7 ವರ್ಷಗಳ ಕಠಿಣ ಸಜೆ ವಿಧಿಸಿದೆ.

ಬೀದರ್ ತಾಲ್ಲೂಕಿನ ಚಾಂಬೋಳಿ ಗ್ರಾಮದ ಗ್ರಾಮ ಲೆಕ್ಕಿಗ ರಾಜ್ ಕುಮಾರ್ ಎಂಬಾತನೇ ಲೋಕಾಯುಕ್ತ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದು, ಕಳೆದ 6 ವರ್ಷಗಳ ಹಿಂದೆ ಅಂದರೆ 2009 ಆಗಸ್ಟ್ 8ರಂದು ಆಸ್ತಿ ವಿವಾದ ಬಗೆಹರಿಸಲು ವ್ಯಕ್ತಿಯೊಬ್ಬರಿಂದ 600 ರು. ಲಂಚ ಪಡೆದಿದ್ದ. ರಾಜ್ ಕುಮಾರ್ ಲಂಚ ಪಡೆಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ್ದ ಬೀದರ್ ಜಿಲ್ಲೆಯ ಲೋಕಾಯುಕ್ತ ಪೊಲೀಸರು ಆತನನ್ನು ಸಾಕ್ಷಿ ಸಮೇತ ಬಂಧನಕ್ಕೊಳಪಡಿಸಿದ್ದರು. ಬಳಿಕ ಆತನ ವಿರುದ್ಧ ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆ 7 ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 13 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಸತತ 6 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ ಬೀದರ್ ಲೋಕಾಯುಕ್ತ ನ್ಯಾಯಾಲಯ ಇಂದು ತನ್ನ ಮಹತ್ವದ ತೀರ್ಪು ಪ್ರಕಟಿಸಿದ್ದು, ಅಪರಾಧಿ ರಾಜ್ ಕುಮಾರ್ ಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 8 ಸಾವಿರ ರು. ಹಣವನ್ನು ದಂಡವಾಗಿ ವಿಧಿಸಿದೆ. "ದೇಶದಲ್ಲಿ ಭ್ರಷ್ಟಾಚಾರ ಪ್ರಕರಣಗಳು ಮಿತಿ ಮೀರಿದ್ದು, ಇಲ್ಲಿ ಹಣದ ಪ್ರಮಾಣ ಗಣನೆಗೆ ಬರುವುದಿಲ್ಲ. 1 ರುಪಾಯಿಯನ್ನು ಲಂಚವಾಗಿ ಸ್ವೀಕರಿಸಿದರೂ ಅದೂ ಲಂಚವೇ.. 1 ಲಕ್ಷ ರು.ಗಳನ್ನು ಲಂಚವಾಗಿ ಸ್ವೀಕರಿಸಿದರೂ ಅದು ಲಂಚವೇ. ಹೀಗಾಗಿ ಪ್ರಕರಣದಲ್ಲಿ ಆರೋಪಿಯನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ" ಎಂದು ನ್ಯಾಯಮೂರ್ತಿ ಸಂಜುಕುಮಾರ್ ಹಂಚಾಟೆ ಅಭಿಪ್ರಾಯಪಟ್ಟಿದ್ದಾರೆ.

ಆತಂಕದಲ್ಲಿ ರಾಜಕುಮಾರ್ ಕುಟುಂಬ
ಇನ್ನು ಅತ್ತ ಲೋಕಾಯುಕ್ತ ನ್ಯಾಯಾಲಯ ತನ್ನ ತೀರ್ಪು ಪ್ರಕಟಿಸುತ್ತಿದ್ದಂತೆಯೇ ಇತ್ತ ಅಪರಾಧಿ ರಾಜಕುಮಾರ್ ಕುಟುಂಬ ಸದಸ್ಯರಲ್ಲಿ ಆತಂಕ ಮನೆ ಮಾಡಿದೆ. ನ್ಯಾಯಾಲಯದ ಆದೇಶ ಹೊರಬೀಳುತ್ತಿದ್ದಂತೆಯೇ ನ್ಯಾಯಾಲಯದ ಆವರಣದಲ್ಲಿದ್ದ ಅವರ ಪತ್ನಿ ಮತ್ತು ಮಕ್ಕಳು ಅವರ ಸಂಬಂಧಿಕರು ಕಣ್ಣೀರು ಹಾಕಿದ ಘಟನೆ ನಡೆಯಿತು. ಅಪರಾಧಿ ರಾಜ್ ಕುಮಾರ್ ಗೆ 5 ಜನ ಹೆಣ್ಣುಮಕ್ಕಳಿದ್ದು, ಕುಟುಂಬಕ್ಕೆ ಆತನೇ ಆಧಾರ ಎಂದು ಹೇಳಲಾಗುತ್ತಿದೆ. ಇದೀಗ ಆತ ಜೈಲು ಪಾಲಾಗಿದ್ದು, ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ.

ಒಟ್ಟಾರೆ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ನ್ಯಾಯಾಲಯ ರಾಜಕುಮಾರ್ ಪ್ರಕರಣದ ಮೂಲಕ ಸರ್ಕಾರಿ ಭ್ರಷ್ಟ ಅಧಿಕಾರಿಗಳಿಗೆ ಸ್ಪಷ್ಟ ಎಚ್ಚರಿಕೆ ರವಾನಿಸಿದೆ.

SCROLL FOR NEXT