ಜೈಪುರ: ಮಾಜಿ ಐಪಿಲ್ ನಿರ್ದೇಶಕ ಲಲಿತ್ ಮೋದಿ ಅವರೊಂದಿಗಿನ ತಮ್ಮ ಸಂಬಂಧ ವಿವಾದಕ್ಕೀಡಾಗಿರುವ ಹಿನ್ನಲೆಯಲ್ಲಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರ ರಾಜೆ ತಮ್ಮ ಬ್ರಿಟನ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.
ತಮ್ಮ ನಿಗದಿತ ಲಂಡನ್ ಪ್ರವಾಸವನ್ನು ರಾಜೆ ಇಂದು ರದ್ದುಗೊಳಿಸಿದ್ದಾರೆ.
ನವೆಂಬರ್ ನಲ್ಲಿ ನಡೆಯುವ ರಾಜಸ್ಥಾನ ಹೂಡಿಕೆದಾರರ ಸಭೆಗೂ ಮುಂಚಿತವಾಗಿ ಲಂಡನ್ ನಲ್ಲಿ ಉದ್ದಿಮೆದಾರರನ್ನು ಭೇಟಿ ಮಾಡುವ ಸಲುವಾಗಿ ರಾಜೆ ಲಂಡನ್ ಗೆ ತೆರಳಬೇಕಿತ್ತು.
ಜೂನ್ ೨೭ ರಿಂದ ಜುಲೈ ೨ರವರೆಗೆ ಮುಖ್ಯಮಂತ್ರಿ ಲಂಡನ್ ಪ್ರವಾಸ ಕೈಗೊಳ್ಳಬೇಕಿತ್ತು ಆದರೆ ನೀತಿ ಆಯೋಗದ ಒಂದು ಪ್ರಮುಖ ಸಭೆಯಲ್ಲಿ ಭಾಗವಹಿಸಬೇಕಿರುವುದರಿಂದ ಬ್ರಿಟನ್ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ದು ಮುಖ್ಯಮಂತ್ರಿ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.
ಲಲಿತ್ ಮೋದಿ ಅವರಿಗೆ ಬ್ರಿಟನ್ ಮತ್ತು ಪೋರ್ಚುಗಲ್ ಗೆ ತೆರಳಲು ಪ್ರವಾಸ ದಾಖಲೆಗಳನ್ನು ಸಿಗುವಂತೆ ಸಹಾಯ ಮಾಡಿದ ಆರೋಪವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜೆ ಎದುರಿಸುತ್ತಿದ್ದಾರೆ. ಐಪಿಲ್ ನಲ್ಲಿ ನಡೆದ ಅವ್ಯವಹಾರಗಳ ತನಿಖೆಗೆ ಬೇಕಾಗಿರುವ ಲಲಿತ್ ಮೋದಿ ಇಂಗ್ಲೆಂಡಿನಲ್ಲಿ ವಾಸವಾಗಿದ್ದಾರೆ.