ಕಬ್ಬಿನ ಗದ್ದೆಯಲ್ಲಿ ಮೃತಪಟ್ಟ ರೈತನ ನೋಡಲು ಆಗಮಿಸಿರುವ ಗ್ರಾಮಸ್ಥರು
ಮಂಡ್ಯ: ರಾಜ್ಯದಲ್ಲಿ ಕಬ್ಬಿನ ಬಿಲ್ ಬಾಕಿ ಪಾವತಿ ವಿಚಾರವಾಗಿ ರೈತರ ಪ್ರತಿಭಟನೆ, ರಾಜಕೀಯ ಸಂಘರ್ಷ ತಾರಕಕ್ಕೆ ಏರಿರುವ ಸಂದರ್ಭದಲ್ಲಿಯೇ ಕಬ್ಬು ಬೆಳೆಗಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಾಂಡವಪುರ ತಾಲೂಕಿನ ಗಾಣದ ಹೊಸೂರು ಗ್ರಾಮದ ನಿಂಗೇಗೌಡ (60) ಗುರುವಾರ ಬೆಳಗ್ಗೆ ಕಬ್ಬಿನ ಬೆಳೆಗೆ ಬೆಂಕಿ ಹಚ್ಚಿ, ಅದರೊಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಕಲಚೇತನರಾಗಿದ್ದ ಅವರು ತಾವು ಬೆಳೆದ ಕಬ್ಬಿಗೆ ಸೂಕ್ತ ಬೆಲೆ ಸಿಗದಿರುವುದರಿಂದ ಹಾಗೂ ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಹೊರವಲಯದಲ್ಲಿ ನಿಂಗೇಗೌಡ ಅವರಿಗೆ ಸೇರಿದ 20 ಗುಂಟೆ ಜಮೀನಿದೆ. ಕಬ್ಬು ಬೆಳೆಯಲು 1.60 ಲಕ್ಷ ರುಪಾಯಿ ಕೈ ಸಾಲ ಮಾಡಿದ್ದರು. ಕಬ್ಬು ಕಟಾವಿನ ಹಂತಕ್ಕೆ ಬಂದಿತ್ತು. ಈ ಮಧ್ಯೆ ಸಾಲಗಾರರು ಮನೆ ಬಳಿ ಬಂದು ಸಾಲದ ಬಡ್ಡಿಗಾಗಿ ಪೀಡಿಸುತ್ತಿದ್ದರು.
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವ ಕಾರ್ಯ ಆರಂಭಿಸದ ಕಾರಣ ಕಬ್ಬನ್ನು ಏನು ಮಾಡಬೇಕೆಂಬ ವಿಚಾರದಲ್ಲಿ ಗೌಡರು ಕಂಗಾಲಾಗಿದ್ದರು. ಎರಡು ದಿನಗಳ ಹಿಂದೆಯಷ್ಟೇ ಅಕ್ಕಪಕ್ಕದ ಗ್ರಾಮಗಳ ಗಾಣದ ಮಾಲೀಕರಲ್ಲಿ ಕಬ್ಬು ಖರೀದಿ ಮಾಡುವಂತೆ ಮಾತುಕತೆ ನಡೆಸಿದ್ದರು. ಗಾಣದ ಮಾಲೀಕರು ಟನ್‍ಗೆ ರು.750 ನೀಡುವುದಾಗಿ ತಿಳಿಸಿದಾಗ ಆ ಮೊತ್ತಕ್ಕೆ ಕಬ್ಬು ನೀಡದಿರಲು ನಿರ್ಧರಿಸಿದ್ದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಸಾಲಗಾರರ ಒತ್ತಡ ಹೆಚ್ಚಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಅದರಂತೆ ಗುರುವಾರ ಬೆಳಗ್ಗೆ 11.30ರ ಸಮಯದಲ್ಲಿ ತಮ್ಮ ಜಮೀನಿನ ಬಳಿ ಬಂದಿದ್ದಾರೆ. ಗದ್ದೆಯಲ್ಲಿ ಕಬ್ಬು ಒಣಗುತ್ತಿರುವುದನ್ನು ಕಂಡು ಮರುಗಿದ ನಿಂಗೇಗೌಡ, ಕೊನೆಗೆ ತಾವು ಸಾಲ ಮಾಡಿ ಬೆಳೆದ ಬೆಳೆಗೆ ಕೈಯ್ಯಾರೆ ಬೆಂಕಿ ಇಟ್ಟಿದ್ದಾರೆ. ಅದೇ ನೋವಿನಲ್ಲಿ ಬೆಂಕಿ ಹಚ್ಚಿದ ಕಬ್ಬಿನ ಗದ್ದೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ನಿಂಗೇಗೌಡ ಬೆಂಕಿಗೆ ಆಹುತಿಯಾಗಿದ್ದರು.
ರೈತ ನಿಂಗೇಗೌಡರ ಕುಟುಂಬಕ್ಕೆ ಜಿಲ್ಲಾಡಳಿತ ತಾತ್ಕಾಲಿಕವಾಗಿ ರು.1.20 ಲಕ್ಷ ಪರಿಹಾರ ನೀಡಿದೆ. ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಅವರು ನಿಂಗೇಗೌಡರ ಪತ್ನಿ ಬೋರಮ್ಮ ಅವರಿಗೆ ಚೆಕ್ ಹಸ್ತಾಂತರಿಸಿದರು. ಈ ಮೊದಲು ಜಿಲ್ಲಾಧಿಕಾರಿಗಳು ರು. 20 ಸಾವಿರ ಚೆಕ್ ಅನ್ನು ಪರಿಹಾರ ರೂಪದಲ್ಲಿ ನೀಡಲು ಮುಂದಾದಾಗ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದರು. ಶ್ರೀರಂಗಪಟ್ಟಣ-ಬೀದರ್ ಹೆದ್ದಾರಿಯಲ್ಲಿ ಸೈಜು ಗಲ್ಲುಗಳನ್ನು ಅಡ್ಡವಿಟ್ಟು ಪ್ರತಿಭಟನೆ ನಡೆಸಿದ್ದರು.
ಕಬ್ಬಿನ ಬಾಕಿ ಹಣ ಪಾವತಿಗಾಗಿ ಸಕ್ಕರೆ ಕಾರ್ಖಾನೆ ಎದುರು ಧರಣಿ ನಡೆಸುತ್ತಿದ್ದ ಇಬ್ಬರು ರೈತರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆಳಂದ ತಾಲೂಕಿನಲ್ಲಿ ಗುರುವಾರ ನಡೆದಿದೆ. ಭೂಸನೂರು ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆ ಅಂಗಳದಲ್ಲಿ ಶುರುವಾಗಿರುವ ಧರಣಿಯಲ್ಲೇ ವಿಷ ಕುಡಿದು, ಹಗ್ಗ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆಯಿತು. ಮಲ್ಲಪ್ಪ ಮೈನಾಳೆ ವಿಷ ಸೇವಿಸಿ, ಸಿದ್ದಪ್ಪ ಜಗತಿ ಕೊರಳಿಗೆ ಹಗ್ಗ ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಆತ್ಮಹತ್ಯೆಗೆ ಯತ್ನಿಸಿದ ಇಬ್ಬರೂ ರೈತರು ಕಬ್ಬು ಮಾರಿದರೂ ಹಣ ಕೈ ಸೇರದೆ ಸಾಲಗಾರರ ಕಾಟ ಹೆಚ್ಚಾಗಿದ್ದಕ್ಕೆ ಮನನೊಂದಿದ್ದಾರೆ ಎಂದು ಸ್ಥಳದಲ್ಲಿದ್ದ ಇತರೆ ಕಬ್ಬು ಬೆಳೆಗಾರರು ತಿಳಿಸಿದ್ದಾರೆ.
ನಿಂಗೇಗೌಡ ಕಬ್ಬನ್ನು ಗಾಣಕ್ಕೆ ಕೊಡಲು ನಿರ್ಧರಿಸಿದ್ದ. ಆ ಗಾಣದವರು ಈಗಿನ ಲೆಕ್ಕಾಚಾರದಂತೆ ಪ್ರತಿ ಟನ್‍ಗೆ ರು.700 ಕೊಡುತ್ತೇವೆ ಎಂದು ಹೇಳಿದ್ದಾರೆ. ಇದರಿಂದ ಆತ ಬೇಸತ್ತಿದ್ದ. ಇಷ್ಟು ಹಣಕ್ಕೆ ಕಬ್ಬು ಮಾರಾಟ ಮಾಡಿದರೆ ಸಮಸ್ಯೆಯಾಗುತ್ತದೆ ಎಂದು ತಮ್ಮವರೊಂದಿಗೆ ಅಳಲು ತೋಡಿಕೊಂಡಿದ್ದ. ಅಲ್ಲದೆ, ಕಬ್ಬಿಗೆ ಬೆಂಕಿ ಹಚ್ಚಿ ತಾನೂ ಹಾರುವುದಾಗಿ ಹಲವು ಬಾರಿ ಕುಟುಂಬದವರೊಂದಿಗೆ ಹೇಳಿಕೊಂಡಿದ್ದ ಎನ್ನಲಾಗಿದೆ. ರೈತರಿಗೆ ಆತ್ಮಹತ್ಯೆ ಪರಿಹಾರವಾಗಲಾರದು. ರೈತರು ಎಂದಿಗೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು.
-ಮಹದೇವಪ್ರಸಾದ್, ಸಹಕಾರ ಮತ್ತು ಸಕ್ಕರೆ ಸಚಿವ
ಮುಖ್ಯಮಂತ್ರಿ ಸಿದ್ದರಾಮಯ್ಯ ಕಬ್ಬು ಬೆಳೆಗಾರರ ಬಾಕಿ ಚುಕ್ತಾ ಮಾಡಿಯೇ ಬೆಳಗಾವಿ ಅಧಿವೇಶನಕ್ಕೆ ಬರಲಿ. ಕಬ್ಬು ಬೆಳೆಗಾರರಿಗೆ ಎಫ್ ಆರ್‍ಪಿ ಪ್ರಕಾರ ಈ ವರ್ಷವೂ ಸೂಕ್ತ ಬೆಲೆ ಕೊಟ್ಟಿಲ್ಲ. ಕಳೆದ ವರ್ಷದ ಬಾಕಿ ರು.960 ಕೋಟಿಯನ್ನೂ ಬಿಡುಗಡೆ ಮಾಡಿಸಿಲ್ಲ. ಇದರ ಫಲವಾಗಿ ರಾಜ್ಯದಲ್ಲಿ ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
-ಜಗದೀಶ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷ ನಾಯಕ
ರಾಜ್ಯದ ರೈತನೊಬ್ಬ ತಾನು ಬೆಳೆದ ಕಬ್ಬಿನ ಬೆಳೆಗೆ ಬೆಂಕಿಯನ್ನಿಟ್ಟು ಅದರಲ್ಲೇ ಪ್ರಾಣ ತ್ಯಾಗ ಮಾಡುತ್ತಾನೆ ಎಂದರೆ ಆತನಿಗೆ ಎಷ್ಟು ಸಂಕಟವಾಗಿರಬೇಕು. ರಾಜ್ಯ ಸರ್ಕಾರಕ್ಕೆ ಇದಕ್ಕಿಂತ ನಾಚಿಕೆಗೇಡಿನ ವಿಷಯ ಬೇರಿಲ್ಲ. ರೈತರ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ರೈತರ ಆತ್ಮಹತ್ಯೆಗಳ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ