ಪಾಟ್ನಾ: ಬಿಹಾರದ ನಳಂದಾ ಜಿಲ್ಲೆಯ ಪ್ರಖ್ಯಾತ ಶಾಲೆ ದೇವೇಂದ್ರ ಪಬ್ಲಿಕ್ ಸ್ಕೂಲ್ ನ ಸಮೀಪದ ಗುಂಡಿಯಲ್ಲಿ ಇಬ್ಬರು ಮಕ್ಕಳ ಮೃತ ದೇಹ ಕಂಡುಬಂದದ್ದರಿಂದ ಜನರ ಗುಂಪು ಶಾಲೆಯ ಪ್ರಾಂಶುಪಾಲರನ್ನು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಭಾನುವಾರ ವರದಿಯಾಗಿದೆ.
ಮೊದಲಿಗೆ ಅಲ್ಲಿನ ನಿವಾಸಿಗಳು ಹಾಗೂ ಮೃತಪಟ್ಟ ಮಕ್ಕಳ ಕುಟುಂಬ ಸದಸ್ಯರು ಶಾಲೆಯ ಮೇಲೆ ದಾಳಿ ಮಾಡಿ ಅಲ್ಲಿನ ವಾಹನಗಳಿಗೆ ಬೆಂಕಿ ಹಚ್ಚಿರುವುದಲ್ಲದೆ, ಶಾಲೆಯ ಪ್ರಾಂಶುಪಾಲ ದೇವೇಂದ್ರ ಪ್ರಸಾದ್ ಅವರಿಗೆ ದೊಣ್ಣೆಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಒಂದು ವರದಿಯ ಪ್ರಕಾರ ಪ್ರಾಂಶುಪಾಲರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ ಎನ್ನಲಾಗಿದೆ.
"ರವಿಕುಮಾರ್ ಮತ್ತು ಸಾಗರ್ ಕುಮಾರ್, ಡಿಪಿಎಸ್ ಶಾಲೆಯ ಈ ಇಬ್ಬರು ಮಕ್ಕಳ ದೇಹವನ್ನು ಶಾಲೆಯ ಸಮೀಪದ ನೀರು ತುಂಬಿದ್ದ ಗುಂಡಿಯಿಂದ ಹೊರತೆಗೆಯಲಾಗಿದೆ. ಇದು ಅಲ್ಲಿನ ನಿವಾಸಿಗಳನ್ನು ಕುಪಿತಗೊಳಿಸಿದೆ" ಎಂದು ನಳಂದ ಪೋಲಿಸ್ ಸ್ಟೇಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಕ್ಕಳು ಶಾಲೆಯ ಸಿಬ್ಬಂದಿಗಳಿಗೆ ತಿಳಿಸದೇ ಶಾಲೆ ತೊರೆದು ಹೋಗಿದ್ದರು ಎಂದು ಇದಕ್ಕೂ ಮೊದಲು ದೇವೆಂದ್ರ ಪ್ರಸಾದ್ ತಿಳಿಸಿದ್ದರು. ಪೊಲೀಸ್ ಮಹಾನಿರ್ದೇಶಕ ಸಿದ್ಧಾರ್ಥ್ ಮೋಹನ್ ಜೈನ್ ಅವರು ಈ ಘಟನೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.