ಅಥೆನ್ಸ್: ಯುರೋಪಿಯನ್ ಸೆಂಟ್ರಲ್ ಬ್ಯಾಂಕ್, ಗ್ರೀಸ್ ದೇಶಕ್ಕೆ ತುರ್ತು ನಿಧಿಯನ್ನು ನೀಡಲು ನಿರಾಕರಿಸಿರುವುದರಿಂದ ದೇಶದ ಎಲ್ಲ ಬ್ಯಾಂಕುಗಳು ಒಂದು ವಾರದವರೆಗೆ ಸ್ಥಗಿತಗೊಂಡಿರುತ್ತವೆ ಎಂದು ಗ್ರೀಕ್ ಸರ್ಕಾರ ಸೋಮವಾರ ಧೃಢೀಕರಿಸಿದೆ.
ಅಧಿಕೃತ ಸರ್ಕಾರಿ ಗೆಜೆಟ್ ನಲ್ಲಿ ಗ್ರೀಕ್ ಸಂಪುಟ ಮಂಡಲಿಯ ನಿರ್ಧಾರಗಳ ನ್ಯಾಯಾಜ್ಞೆಯನ್ನು ಪ್ರಕಟಿಸಲಾಗಿದೆ.
ಈ ನಿರ್ಧಾಗರಗಳಲ್ಲಿ ಅಥೆನ್ಸ್ ಸ್ಟಾಕ್ ಎಕ್ಸ್ಚೇಂಜ್ ಅನ್ನು ಕೂಡ ಸೋಮವಾರ ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿದೆ. ಗ್ರೀಸ್ ಸರ್ಕಾರದ ಜೊತೆಗೆ ಸಾಲವನ್ನು ವಿಸ್ತರಿಸಲು ಯೂರೋಜೋನ್ ನಿರಾಕರಿಸಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಈ ಅವಧಿಯಲ್ಲಿ ಸಾರ್ವಜನಿಕರಿಗೆ ನಗದು ಹಿಂಪಡೆಯುವಿಕೆಯನ್ನು ೬೦ ಯೂರೋಗಳಿಗೆ ಕಡಿತಗೊಳಿಸಲಾಗುವುದು ಎಂದು ಕೂಡ ನ್ಯಾಯಾಜ್ಞೆ ತಿಳಿಸಿದೆ.
ಮಂಗಳವಾರದ ಒಳಗೆ ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಮ್ಎಫ್) ಸಂಸ್ಥೆಗೆ ಅಥೆನ್ಸ್ ೧.೬ ಬಿಲಿಯನ್ ಯುರೋಗಳನ್ನು ಬಾಕಿ ನೀಡಬೇಕಿದೆ.
ಆರ್ಥಿಕ ಕುಸಿತದಿಂದ ಪಾರುಮಾಡಲು ಗ್ರೀಸ್ ಮತ್ತು ಯೂರೋಜೋನ್ ನಡುವೆ ನಡೆದಿದ್ದ ಮಾತುಕತೆ ವಿಫಲವಾಗಿದ್ದು ಈ ವಿಷಯದ ಬಗ್ಗೆ ಜುಲೈ ೫ ರಂದು ನೇರ ಮತದಾನಕ್ಕೆ ಗ್ರೀಸ್ ಪ್ರಧಾನಿ ಅಲೆಕ್ಸಿ ಸಿಪ್ರಸ್ ಕರೆ ನೀಡಿದ್ದಾರೆ.
೧೯ ದೇಶಗಳ ಯೂರೋಜೋನ್ ನಿಂದ ಗ್ರೀಸ್ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ.