ನವದೆಹಲಿ: ಏಪ್ರಿಲ್ ಮತ್ತು ಮೇ ತಿಂಗಳಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಕರಂಟ್ ಬಿಲ್ ಬರೋಬರಿ ೯೧,೦೦೦ ರೂ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಬಂದಿರುವ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.
ದೆಹಲಿ ಸರ್ಕಾರದ ಸಾಮಾನ್ಯ ಆಡಳಿತ ಇಲಾಖೆ ಕೇಜ್ರಿವಾಲ್ ನಿವಾಸದ ವಿದ್ಯುಚ್ಚಕ್ತಿ ಬಿಲ್ ನಕಲು ಪ್ರತಿಗಳನ್ನು ನೀಡಿದೆ. ಆರ್ ಟಿ ಐ ಕಾರ್ಯಕರ್ತ ವಿವೇಕ್ ಗಾರ್ಗ್ ಅವರು ಈ ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ದೆಹಲಿ ಬಿಜೆಪಿ ಘಟಕ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಬಿಲ್ ಮೊತ್ತ ಒಂದು ಲಕ್ಷಕ್ಕೂ ಹೆಚ್ಚಿದ್ದು, ಎಲ್ಲ ಎಎಪಿ ಸಚಿವರ ನಿವಾಸದ ವಿದ್ಯುಚ್ಚಕ್ತಿ ಬಿಲ್ ವಿವರಗಳನ್ನು ಕೇಳಲಿದ್ದೇವೆ ಎಂದು ತಿಳಿಸಿದೆ.
"ಮುಖ್ಯಮಂತ್ರಿ ನಿವಾಸ ಎರಡು ವಿದ್ಯುಚ್ಚಕ್ತಿ ಮೀಟರ್ ಗಳನ್ನು ಹೊಂದಿದೆ. ಈ ಎರಡು ಮೀಟರ್ ಗಳ ಇತ್ತೀಚಿನ ಬಿಲ್ ಮೊತ್ತ ೫೫೦೦೦ ಮತ್ತು ೪೮೦೦೦ (ಒಟ್ಟು ೧,೦೩,೦೦೦ರೂ)" ಎಂದು ಬಿಜೆಪಿ ವಕ್ತಾರ ಪರವೀಣ್ ಕಪೂರ್ ತಿಳಿಸಿದ್ದಾರೆ.
ಬಿಲ್ ಗಳನ್ನು ಪರಿಶೀಲಿಸಿ ಪ್ರತಿಕ್ರಿಯೆ ನೀಡಲಿದ್ದೇವೆ ಎಂದು ಸರ್ಕಾರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.