ನವದೆಹಲಿ: ಒಂದು ಕಡೆ ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ವಿವಾದ ಭಾರತದಲ್ಲಿ ರಾಜಕೀಯ ಪಕ್ಷಗಳ ಬೆವರಿಳಿಸುತ್ತಿದ್ದರೆ, ಮತ್ತೊಂದೆಡೆ ಲಲಿತ್ ವಿರುದ್ಧದ ತನಿಖೆಯನ್ನು ಜಾರಿ ನಿರ್ದೇಶನಾಲಯ ಬಿರುಸುಗೊಳಿಸಿದೆ.
ತನಿಖೆ ಮುಂದುವರಿಸಲು ಸಿಂಗಾಪುರ ಮತ್ತು ಮಾರಿಷಸ್ ಸರ್ಕಾರಗಳ ಕಾನೂನು ನೆರವನ್ನೂ ಕೋರಿದೆ. ಐಪಿಎಲ್ ಹಣಕಾಸು ಅವ್ಯವಹಾರ ಮತ್ತು 2009ರ ಪಂದ್ಯದ ವೇಳೆ ಮಾಧ್ಯಮ ಹಕ್ಕುಗಳ ನೀಡಿಕೆಯಲ್ಲಿನ ಅಕ್ರಮದ ಬಗ್ಗೆ ತನಿಖೆ ತೀವ್ರಗೊಳಿಸಲು ಮುಂದಾಗಿರುವ ಜಾರಿ ನಿರ್ದೇಶನಾಲಯ (ಇಡಿ), ಎರಡೂ ದೇಶಗಳಿಗೆ ಕಳುಹಿಸುವ ಲೆಟರ್ಸ್ ರೆಗೋಟರೀಸ್(ಸಾಗರೋತ್ತರ ನ್ಯಾಯಾಂಗ ಮನವಿ) ಅನ್ನು ಕೋರ್ಟ್‍ನಿಂದ ಪಡೆಯುವ ಕಾನೂನು ಪ್ರಕ್ರಿಯೆಯನ್ನು ಆರಂಭಿಸಿದೆ.
ಇದರಿಂದಾಗಿ, ವಿದೇಶದಲ್ಲಿರುವ ಲಲಿತ್ ಅವರ ವಹಿವಾಟುಗಳು ಮತ್ತು ಅಂತಾರಾಷ್ಟ್ರೀಯ ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿ ಸಿಗಲಿವೆ. ಜತೆಗೆ, ಮುಂಬೈ ವಲಯ ಕಚೇರಿಯ ಇಡಿ ತಂಡವೊಂದು ಸಿಂಗಾಪುರಕ್ಕೆ ತೆರಳಿದೆ. ಆದರೆ, ಅವರು ತೆರಳಿದ್ದು ಬೇರೆ ಪ್ರಕರಣಗಳ ತನಿಖೆಗೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತು ಲಲಿತ್ ಮೋದಿ ವಿರುದ್ಧದ ಸಾಕ್ಷ್ಯ ಒದಗಿಸುವುದನ್ನು ಕಾಂಗ್ರೆಸ್ ಸತತ 2ನೇ ದಿನವೂ ಮುಂದುವರಿಸಿದೆ. ಈ ಇಬ್ಬರೂ ನಾಯಕರ ಕುಟುಂಬಗಳ ನಡುವೆ ಕ್ರಿಮಿನಲ್ ಸಂಬಂಧವಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಧೋಲ್‍ಪುರ ಅರಮನೆಗೆ ಸಂಬಂಧಿಸಿದ ಇನ್ನಷ್ಟು ಪುರಾವೆ ಬಹಿರಂಗಪಡಿಸಿದೆ. ಧೋಲ್‍ಪುರ ಅರಮನೆ ರಾಜಸ್ಥಾನ ಸರ್ಕಾರಕ್ಕೆ ಸೇರಿದ್ದು, ರಾಜೇ ಕುಟುಂಬಕ್ಕಲ್ಲ ಎನ್ನುವುದನ್ನು ತೋರಿಸುವ 1949ರ ದಾಖಲೆಗಳನ್ನು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಅವರು ಮಂಗಳವಾರ ಮುಂದಿಟ್ಟಿದ್ದಾರೆ. ``ರಾಜೇ ಅವರ ಪರಿತ್ಯಕ್ತ ಪತಿ ಹೇಮಂತ್ ಸಿಂಗ್ ಅವರು ಪುತ್ರ ದುಶ್ಯಂತ್ ಹೆಸರಿಗೆ ಬರೆದ ಅರಮನೆಯದು'' ಎಂಬ ಬಿಜೆಪಿ ವಾದವನ್ನು ತಳ್ಳಿ ಹಾಕಿರುವ ಜೈರಾಮ್ 2007ರಲ್ಲಿ ಹೇಮಂತ್ ಹಾಗೂ ದುಶ್ಯಂತ್ ನಡುವೆ ಕೇವಲ ಚರ ಆಸ್ತಿಗೆ ಸಂಬಂಧಿಸಿ ಮಾತ್ರ ಒಪ್ಪಂದ ನಡೆದಿದ್ದು, ಅರಮನೆ ಯಾವತ್ತೂ ಸರ್ಕಾರಕ್ಕೇ ಸೇರಿದ್ದು. 1949ರಲ್ಲಿ ಅರಮನೆಯನ್ನು ಸ್ವಾಧೀನಪಡಿಸಿಕೊಂಡಿದ್ದ ಸರ್ಕಾರ, ಆಗಿನ ಧೋಲ್‍ಪುರ ಮಹಾರಾಜರಾಗಿದ್ದ ರಾಜೇ ಅವರ ತಾತನಿಗೆ ಅವರ ಜೀವಿತಾವಧಿವರೆಗೆ ಅಲ್ಲಿ ವಾಸಿಸಲು ಅನುಮತಿ ನೀಡಿತ್ತು ಎಂದು ಜೈರಾಮ್ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಅವರು ಈ ಬಗ್ಗೆ ತನಿಖೆಗೆ ಆದೇಶಿಸುವವರೆಗೂ ನಾವು ದಾಖಲೆ ಬಹಿರಂಗ ಮುಂದುವರಿಸುತ್ತೇವೆ ಎಂದೂ ಹೇಳಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ರಾಜೇ ಸರ್ಕಾರವು ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದೆ. ಇಲ್ಲೂ ಲಲಿತ್ ಮೋದಿ ಮಾಲೀಕತ್ವದ ಸಿಗರೇಟ್ ಉತ್ಪಾದಕ ಕಂಪನಿಗೆ ನೆರವಾಗುವ ಉದ್ದೇಶ ರಾಜೇಗಿತ್ತೇ ಎಂಬ ಅನುಮಾನ ಮೂಡುತ್ತಿದೆ ಎಂದಿದ್ದಾರೆ ಜೈರಾಂ.