ನವದೆಹಲಿ: ಲೋಕಸಭೆಯಲ್ಲಿ ಬಿಜೆಪಿ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಅವರ ವಿವಾದಾತ್ಮಕ ಹೇಳಿಕೆಗೆ ತಮ್ಮ ಸಹಮತ ಇಲ್ಲ ಎಂದಿದ್ದಾರೆ.
"ಜಮ್ಮು ಕಾಶ್ಮೀರದಲ್ಲಿ ಸರಾಗವಾಗಿ ನಡೆದ ವಿಧಾನಸಭಾ ಚುನಾವಣೆಯ ಶ್ರೇಯಸ್ಸನ್ನು ಪಾಕಿಸ್ತಾನ, ಹುರಿಯತ್ ಮತ್ತು ಭಯೋತ್ಪಾದನಾ ಸಂಘಟನೆಗಳಿಗೆ ಅರ್ಪಣೆ ಮಾಡಿದ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಅವರ ಹೇಳಿಕೆಯಿಂದ ನಮ್ಮ ಸರ್ಕಾರ ಮತ್ತು ಬಿಜೆಪಿ ಪಕ್ಷ ದೂರ ಉಳಿಯುತ್ತದೆ"
"ಜಮ್ಮು ಕಾಶ್ಮೀರದಲ್ಲಿ ನಡೆದ ಶಾಂತಿಯುತ ಚುನಾವಣೆಯ ಶ್ರೇಯಸ್ಸು ಚುನಾವಣಾ ಆಯೋಗ, ಭದ್ರತಾ ಸೇನೆ, ಸಂಸದೀಯ ಸಮಿತಿ ಮತ್ತು ರಾಜ್ಯದ ಜನರಿಗೆ ಸಲ್ಲುತ್ತದೆ. ನಾನು ಪ್ರಧಾನಿಯವರೊಂದಿಗೆ ಚರ್ಚಿಸಿ ಅವರ ಸಹಮತದಿಂದಲೆ ಈ ಹೇಳಿಕೆ ನೀಡುತ್ತಿದ್ದೇನೆ" ಎಂದು ಲೋಕಸಭೆಯಲ್ಲಿ ವಿಪಕ್ಷಗಳ ವಿರೋಧದ ನಡುವೆ ಹೇಳಿದ್ದಾರೆ.
ಈ ಶ್ರೇಯಸ್ಸನ್ನು ಪಾಕಿಸ್ತಾನಕ್ಕೆ, ಹುರಿಯತ್ತಿಗೆ ಮತ್ತು ಭಯೋತ್ಪಾದನಾ ಸಂಘಟನೆಗೆ ಅರ್ಪಿಸಲು ಮೋದಿ ಅವರು ಮುಫ್ತಿ ಅವರ ಜೊತೆ ಯಾವುದೇ ಮಾತುಕತೆ ನಡೆಸಿರಲಿಲ್ಲ ಎಂದು ಕೂಡ ಅವರು ತಿಳಿಸಿದ್ದಾರೆ.