ಶ್ರೀನಗರ/ನವದೆಹಲಿ: ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮುಫ್ತಿ ಮೊಹಮ್ಮದ್ ಸಯ್ಯದ್ ಮೊದಲ ದಿನವೇ ವಿವಾದಾತ್ಮಕ ಹೇಳಿಕೆ ಕೊಡುವ ಮೂಲಕ ಮೈತ್ರಿ ಪಕ್ಷ ಬಿಜೆಪಿ ಪಕ್ಷವನ್ನು ಕೆರಳಿಸಿದ್ದಾರೆ. ರಾಜ್ಯದಲ್ಲಿ ಚುನಾವಣೆಯನ್ನು ಸರಾಗವಾಗಿ ನಡೆದಿದ್ದನ್ನು ಪಾಕಿಸ್ತಾನ, ಹುರಿಯತ್ ಮತ್ತು ಭಯೋತ್ಪಾದನಾ ಸಂಘಟನೆಗಳಿಗೆ ಅರ್ಪಿಸುವ ಮೂಲಕ, ಬಿಜೆಪಿ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಉಪಮುಖ್ಯಮಂತ್ರಿ ರಾಜ್ಯ ಬಿಜೆಪಿ ಅಧ್ಯಕ್ಷ ಡಾ. ನಿರ್ಮಲ್ ಷಾ ಅವರೊಂದಿಗೆ ಮೊದಲ ಪತ್ರಿಕಾ ಘೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು "ಇದನ್ನು ನಾನು ಅಧಿಕೃತವಾಗಿ ಹೇಳಲು ಇಚ್ಛಿಸುತ್ತೇನೆ ಹಾಗೆಯೆ ಪ್ರಧಾನಿ ಅವರಿಗೂ ತಿಳಿಸಿದ್ದೇನೆ, ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳು ಸರಾಗಿವಾಗಿ ನಡೆದಿರುವುದನ್ನು ಹುರಿಯತ್ ಮತ್ತು ಭಯೋತ್ಪಾದನಾ ಸಂಘಟನೆಗಳಿಗೆ ಅರ್ಪಿಸುತ್ತೇನೆ, ಹಾಗೇ ಗಡಿಯಿಂದಾಚೆಗೆ ಪಾಕಿಸ್ತಾನ ಕೂಡ ಇದಕ್ಕೆ ಸಹಕಾರ ನೀಡಿದೆ" ಎಂದಿದ್ದಾರೆ.
ಇದಕ್ಕೆ ಕೇಂದ್ರ ಗೃಹ ಸಚಿವ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ, ಬಿಜೆಪಿ ಪಕ್ಷದ ವಕ್ತಾರ ಸಂಬಿತ್ ಪಾತ್ರ ಅವರು ಟಿವಿ ವಾಹಿನಿಯೊಂದಿಗೆ "ಜಮ್ಮು ಕಾಶ್ಮೀರದಲ್ಲಿ ನಡೆದ ಶಾಂತಿಯುತ ಮತದಾನ ಸಾಧ್ಯವಾದದ್ದು ಚುನಾವಣಾ ಆಯೋಗ ಮತ್ತು ಭದ್ರತಾ ಪಡೆಗಳಿಂದ" ಎಂದಿದ್ದಾರೆ.
ಪಿಡಿಪಿ ಪಕ್ಷ ಮುಫ್ತಿ ಅವರ ಹೇಳಿಕೆಗೆ ಸ್ಪಷ್ಟೀಕರಣ ನೀಡಲಿದ ನಂತರ ಬಿಜೆಪಿ ಪಕ್ಷ ಪ್ರತಿಕ್ರಿಯಿಸಲಿದೆ ಎಂದಿದ್ದಾರೆ ಬಿಜೆಪಿ ಹಿರಿಯ ಮುಖಂಡರೊಬ್ಬರು.
ಮುಫ್ತಿ ಅವರ ಈ ಹೇಳಿಕೆ ಬಿಜೆಪಿ ಪಕ್ಷವನ್ನು ಇನ್ನೂ ಸಂಕಷ್ಟಕ್ಕೆ ಗುರಿ ಮಾಡಲಿದೆ.