ನವದೆಹಲಿ: ಪ್ರತ್ಯೇಕವಾದಿ ಸಂಘಟನೆ ಜಮ್ಮು ಕಾಶ್ಮೀರದ ಹುರಿಯತ್ ಸಂಘಟನೆಯ ತೀವ್ರವಾದಿ ಮುಖಂಡ ಮಾಶರತ್ ಆಲಂ ಅವರ ಬಿಡುಗಡೆಯಿಂದ ತೀವ್ರ ಮುಜುಗರಕ್ಕೀಡಾಗಿರುವ ಹಾಗು ವಿಪಕ್ಷಗಳಿಂದ ವಾಗ್ದಾಳಿಗೊಳಗಾಗಿರುವ ಕೇಂದ್ರ ಸರ್ಕಾರ, ಪಿಡಿಪಿ ಮತ್ತು ಬಿಜೆಪಿ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿವೆ ಎಂದು ಒಪ್ಪಿಕೊಂಡಿರುವುದಲ್ಲದೆ, ದೇಶದ ಐಕ್ಯತೆಗಾಗಿ ತ್ಯಾಗಕ್ಕೆ ಸಿದ್ಧ ಎಂದಿದೆ.
ರಾಜ್ಯಸಭೆಯಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಯಾರು ಎಷ್ಟೇ ಬಲಿಷ್ಟನಾಗಿದ್ದರೂ ದೇಶದ ಏಕತೆ ಮತ್ತು ಐಕ್ಯತೆ ಜೊತೆ ಆಟವಾಡಲು ಅವಕಾಶ ನೀಡುವುದಿಲ್ಲ ಎಂದು ಆಲಂ ಬಿಡುಗಡೆಯ ವಿಷಯಕ್ಕೆ ಪ್ರತಿಕ್ರಿಯಿಸಿದ್ದಾರೆ.
ಯಾವುದೇ ರಹಸ್ಯ ಕಾರ್ಯಸೂಚಿ ಇಲ್ಲ ಎಂದಿರುವ ಅವರು ಕೇಂದ್ರ ಸರ್ಕಾರ, ಬಿಜೆಪಿ ಭಾಗಿಯಾಗಿರುವ ಜಮ್ಮು ಕಾಶ್ಮೀರ ಸರ್ಕಾರದಿಂದ ಆಲಂ ಬಿಡುಗಡೆಯ ಬಗ್ಗೆ ವರದಿಯನ್ನು ಕೇಳಿದೆ ಎಂದು ತಿಳಿಸಿದ್ದಾರೆ.
"ಬಿಜೆಪಿ ಮತ್ತು ಪಿಡಿಪಿ ಪಕ್ಷಗಳ ನಡುವೆ ಸೈದ್ಧಾಂತಿಕ ಭಿನಾಭಿಪ್ರಾಯಗಳಿರುವುದರಲ್ಲಿ ಯಾವುದೇ ಸಂದೇಹಗಳಿಲ್ಲ.ಈ ಹಿಂದೆ ಪಿಡಿಪಿ ಜೊತೆ ನಮ್ಮ ಯಾವುದೇ ಸಂಬಂಧ ಇರಲಿಲ್ಲ. ಕಳೆದ ೧೦ ದಿನಗಳಿಂದಷ್ಟೇ ಅವರು ನಮ್ಮ ಜೊತೆಗಿರುವುದು. ಅವರ ಮೇಲೆ ಏನಾದರೂ ಪ್ರಭಾವ ಇದ್ದರೆ ನಿಮ್ಮದೇ ಇರಬೇಕು. ನೀವು ಅವರೊಂದಿಗೆ ಹಿಂದೆ ಅಧಿಕಾರದಲ್ಲಿದ್ದವರು" ಎಂದು ಕಾಂಗ್ರೆಸ್ ಪಕ್ಷವನ್ನುದೇಶಿಸಿ ರಾಜನಾಥ್ ಸಿಂಗ್ ಹೇಳಿದ್ದಾರೆ.
"ದೇಶದ್ರೋಹಿಯ ಜೊತೆ ರಾಜಿ ಮಾಡಿಕೊಳ್ಳುವ ಯಾವುದೇ ಪ್ರಶ್ನೆ ಇಲ್ಲ" ಎಂದು ಕೂಡ ಅವರು ತಿಳಿಸಿದ್ದಾರೆ.