ವಾಶಿಂಗ್ಟನ್: ವೆನಿಜ್ಯುಯೆಲಾ ರಾಷ್ಟ್ರ ಅಮೇರಿಕಾ ರಾಷ್ಟ್ರೀಯ ಭದ್ರತೆಗೆ ಮಾರಕ ಎಂದಿರುವ ಅಮೇರಿಕಾ ರಾಷ್ಟ್ರಾಧ್ಯಕ್ಷ ಬರಾಕ್ ಒಬಾಮ, ತನ್ನ ರಾಜಕೀಯ ವಿರೋಧಿಗಳೆಡೆಗೆ ವೆನಿಜ್ಯುಯೆಲಾ ಸರ್ಕಾರದ ನಡವಳಿಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
"ವೆನಿಜ್ಯುಯೆಲಾ ಅಧಿಕಾರಿಗಳು ಈ ಹಿಂದೆ ಮತ್ತು ಈಗಲೂ ಮಾನವ ಹಕ್ಕುಗಳ ಉಲ್ಲಂಘನೆಯಲ್ಲಿ ನಿರತವಾಗಿದ್ದಾರೆ ಹಾಗು ಸಾರ್ವಜನಿಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅಮೇರಿಕಾದ ವಿತ್ತ ಸಂಸ್ಥೆಗಳ ನೆರವು ಮತ್ತು ಆ ದೇಶದ ಆಸ್ತಿಯನ್ನು ಮುಟ್ಟುಗೋಲು ಹಾಕಲು ಅಮೇರಿಕಾ ಈಗ ಸಿದ್ಧವಾಗಿದೆ" ಎಂದು ಶ್ವೇತ ಭವನದ ವಕ್ತಾರ ಜೋಶ್ ಅರ್ನೆಸ್ಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅಮೇರಿಕಾದಲ್ಲಿರುವ ವೆನಿಯುಯೇಲಾದ ೭ ಪ್ರಭಾವಿ ಜನರ ಆಸ್ತಿಗಳನ್ನು ಮುಟ್ಟುಗೋಲು ಹಾಕಿರುವುದಲ್ಲದೆ, ಅಮೇರಿಕಾ ಒಳಬರಲು ಅವರ ಪ್ರವೇಶವನ್ನು ನಿಷೇಧಿಸಲಾಗಿದೆ. ಹಾಗೆಯೆ ವೆನಿಜ್ಯುಯೇಲಾ ಜೊತೆ ವ್ಯವಾರ ಮಾಡುವ ಅಮೇರಿಕಾ ನಾಗರಿಕರ ಮೇಲೂ ಪ್ರತಿಬಂಧ ಹೇರಲಾಗುತ್ತದೆ ಎಂದಿದ್ದಾರೆ. ಹಲವಾರು ವಿದ್ಯಾರ್ಥಿಗಳನ್ನು ಒಳಗೊಂಡಂತೆ, ತನ್ನ ರಾಜಕೀಯ ಖೈದಿಗಳನ್ನು ಕೂಡಲೆ ಬಿಡುಗಡೆ ಮಾಡುವಂತೆ ಅಮೇರಿಕಾ ವೆನಿಜ್ಯುಯೇಲಾಕ್ಕೆ ಒತ್ತಡ ಹೇರಿದೆ ಮತ್ತು ತನ್ನ ತೊಂದರೆಗಳಿಗೆಲ್ಲಾ ವಾಶಿಂಗ್ಟನ್ ಅನ್ನು ದೂಷಿಸುವುದನ್ನು ನಿಲ್ಲಿಸುವಂತೆ ಸೂಚಿಸಿದೆ.