ಪ್ರಧಾನ ಸುದ್ದಿ

ಮುಸ್ಲಿಂ ವೈಯಕ್ತಿಕ ಕಾನೂನು ಸಮಿತಿ ಸಭೆಯಲ್ಲಿ 'ಘರ್ ವಾಪಸಿ' ಚರ್ಚೆ ಸಂಭವ

Guruprasad Narayana

ಲಕನೌ: ಕೆಲವು ಹಿಂದು ಸಂಘಟನೆಗಳು ನಡೆಸುತ್ತಿರುವ 'ಘರ್ ವಾಪಸಿ' (ಮನೆಗೆ ಹಿಂದಿರುಗಿ) ವಿವಾದ, ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಸಮಿತಿಯ (ಎ ಐ ಎಂ ಪಿ ಎಲ್ ಬಿ) ಮೂರು ದಿನಗಳ ಸಭೆಯಲ್ಲಿ ಚರ್ಚೆಯಾಗುವ ಸಂಭವವಿದೆ. ಈ ಸಭೆ ಮಾರ್ಚ್ ೨೦ರಂದು ಜೈಪುರದಲ್ಲಿ ಪ್ರಾರಂಭವಾಗಲಿದೆ.

"ಈ ವಿಷಯ ಸಭೆಯ ಕಾರ್ಯಸುಚಿಯಲ್ಲಿ ಇಲ್ಲವಾದರೂ ಚರ್ಚೆಗೆ ಎತ್ತಿಕೊಳ್ಳಬಹುದು. ದೇಶ ಮುನ್ನಡೆಯುತ್ತಿದೆಯೇ ಅಥವಾ ಹಾಳುಗುತ್ತಿದೆಯೇ ಎಂಬುದರ ಬಗ್ಗೆ ಚಿಂತನೆ ನಡೆಸಬೇಕಿದೆ. ಈ 'ಘರ್ ವಾಪಸಿ' ಕಾರ್ಯಕ್ರಮ ಎಂದರೆ ಏನು?" ಎಂದು ಎ ಐ ಎಂ ಪಿ ಎಲ್ ಬಿಯ ಪ್ರಧಾನ ಕಾರ್ಯದರ್ಶಿ ಮೌಲಾನ ನಿಜಾಮುದ್ದೀನ್ ತಿಳಿಸಿದ್ದಾರೆ.

"ನಾಳೆ ಕ್ರಿಶ್ಚಿಯನ್ನರನ್ನು ಹಿಂದೂಗಳಾಗಿ ಎನ್ನುತ್ತೀರಿ, ಮುಂದಿನ ದಿನ ಮುಸ್ಲಿಮರನ್ನು ಹಿಂದೂಗಳಾಗಿ ಎಂದು ಕರೆ ಕೊಡುತ್ತೀರಿ. ಇದೇನು ತಮಾಷೆ? ಇದು ಇಡೀ ಸಮುದಾಯವನ್ನು ಅವಮಾನಿಸಿದ ಹಾಗೆ" ಎಂದಿದ್ದಾರೆ ಅವರು.

ಎಲ್ಲ ಸಮುದಾಯಗಳು ಹಿಂದಿನಿಂದ ಸೌಹಾರ್ದಯುತವಾಗಿ ಬದುಕುತ್ತಿರುವ ಜಾತ್ಯಾತೀತ ರಾಷ್ಟ್ರ ಇದು ಎಂದಿರುವ ಅವರು ಮುಸ್ಲಿಮರ ವಿರುದ್ಧ ದೊಡ್ಡ ಪ್ರಚಾರ ನಡೆಸಲಾಗುತ್ತಿದೆ. ಇಂತಹ ವಿವಾದಾತ್ಮಕ ವಿಷಯಗಳನ್ನು ಸಾಮಾನ್ಯವಾಗಿ ಸಭೆಯ ಕಾರ್ಯಸೂಚಿಯ ಹೊರಗಡೆ ಇಟ್ಟಿರುತ್ತೇವೆ. ಆದರೆ ಯಾವುದಾದರೂ ಪ್ರಶ್ನೆ ಎದ್ದರೆ ಅದಕ್ಕೆ ಸಮಿತಿ ಉತ್ತರಿಸುತ್ತದೆ ಎಂದಿದ್ದಾರೆ ಮೌಲಾನ.

ಮಹಾರಾಷ್ಟ್ರದಲ್ಲಿ ದನದ ಮಾಂಸ ನಿಷೇಧದ ಬಗ್ಗೆ ಕೇಳಿದ ಪ್ರಶ್ನೆಗೆ "ಇದೆಲ್ಲಾ ರಾಜಕೀಯ" ಎಂದಿರುವ ಅವರು ಮಹಾರಾಷ್ಟ್ರದಲ್ಲಾಗಲೀ, ಕೋಲ್ಕತ್ತಾದಲ್ಲಾಗಲಿ ಮುಸ್ಲಿಮರಷ್ಟೇ ಅಲ್ಲ, ಉಳಿದವರು ಕೂಡ ದನದ ಮಾಂಸ ತಿನ್ನುತ್ತಾರೆ ಎಂದಿದ್ದಾರೆ. ಇದು ಮುಸ್ಲಿಮರಿಗಷ್ಟೆ ಸಂಬಂಧಿಸಿದ ವಿಷಯವಲ್ಲ, ಇದನ್ನು ನಂಬಿರುವ ಹಲವು ಉದ್ಯಮ ಮತ್ತು ಜನರಿಗೆ ತೊಂದರೆಯಾಗಲಿದೆ ಎಂದಿದ್ದಾರೆ.

SCROLL FOR NEXT