ಬೆಂಗಳೂರು: ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ.ರವಿ ಅವರ ಸಾವಿನ ನಿಗೂಢತೆಯನ್ನು ಖಂಡಿಸಿ ಹಾಗೂ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ವಿಪಕ್ಷಗಳು ಧರಣಿಯನ್ನು ಮುಂದುವರೆಸಿದ ಹಿನ್ನಲೆಯಲ್ಲಿ ಇಂದು ಆರಂಭಗೊಂಡ ಕಲಾಪವನ್ನು ಸ್ಪೀಕರ್ ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದಾರೆ.
ಡಿ.ಕೆ.ರವಿ ಅವರ ನಿಗೂಢ ಸಾವಿನ ವಿಚಾರ ಇಂದು ಕೂಡ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಡಿ.ಕೆ ರವಿ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎಂದು ಆಗ್ರಹಿಸಿರುವ ವಿಪಕ್ಷಗಳು ರವಿ ಅವರ ಭಾವಚಿತ್ರವನ್ನು ಹಿಡಿದು, ಕೈಗೆ ಕಪ್ಪು ಪಟ್ಟಿ ಧರಿಸಿ ಸದನದ ಬಾವಿಗಿಳಿದು ಧರಣಿಯನ್ನು ಮುಂದುವರೆಸಿತು.
ರಾಜ್ಯದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸರ್ಕಾರ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಸಿದೆ. ನಿನ್ನೆ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು ರವಿ ಸಾವು ಆತ್ಮಹತ್ಯೆ ಎಂದು ದೃಢೀಕರಣ ನೀಡಿದ್ದಾರೆ.
ಹೀಗಾಗಿಯೇ ರಾಜ್ಯ ಸರ್ಕಾರಿದಂದ ಈ ಪ್ರಕರಣಕ್ಕೆ ನ್ಯಾಯ ಸಿಗುವುದು ಸಾದ್ಯವಿಲ್ಲ. ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಪ್ರತಿಪಕ್ಷಗಳು ಆಗ್ರಹಿಸಿದವು.