ಕೋಲ್ಕತ್ತ: ರಂಗಾಘಾಟ್ ನನ್ ರೇಪ್ ಪ್ರಕರಣವನ್ನು ಸಿಬಿಐಗೆ ವಹಿಸಲು ಪಶ್ಚಿಮಬಂಗಾಳ ಸರ್ಕಾರ ನಿರ್ದರಿಸಿದೆ. "ಈ ಪ್ರಕರಣದ ಗಂಭೀರತೆ ಮತ್ತು ಸೂಕ್ಷತೆ ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ" ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆಗೆ ಸಿಬಿಐಗೆ ಅಗತ್ಯ ಸಹಕಾರ ರಾಜ್ಯ ಸರ್ಕಾರದಿಂದ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
"ಪ್ರಕರಣದ ಗಂಭೀರತೆ ಮತ್ತು ಸೂಕ್ಷ್ಮತೆ ಪರಿಗಣಿಸಿ ಹಾಗೂ ಈ ಘಟನೆ ಗಡಿಭಾಗದಲ್ಲಿ ನಡೆದಿರುವುದರಿಂದ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿಕೊಡಲು ನಿರ್ಧರಿಸಿದ್ದೇನೆ" ಎಂದು ಮುಖ್ಯಮಂತ್ರಿ ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.
"೧೪ ಮಾರ್ಚ್ ೨೦೧೫ರಂದು ನಡೆದ ಈ ರಾಣಾಘಾಟ್ ಘಟನೆ ಅತಿ ಗಂಭೀರವಾದದ್ದು. ಅಪರಾಧಿಗಳನ್ನು ಕೂಡಲೆ ಹಿಡಿಯಲು ಪೋಲಿಸ್ ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಅವರು ಪ್ರಯತ್ನ ಮಾಡುತ್ತಿದ್ದಾರೆ" ಎಂದು ಬ್ಯಾನರ್ಜಿ ತಿಳಿಸಿದ್ದಾರೆ.
ಈ ಘಟನೆಯ ಹಿನ್ನಲೆಯಲ್ಲಿ ಇಲ್ಲಿಯವರೆಗೂ ೧೫ ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.