ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣದ ಪ್ರಾಥಮಿಕ ತನಿಖಾ ವರದಿಯನ್ನು ಸಿಐಡಿ ಸರ್ಕಾರಕ್ಕೆ ಸಲ್ಲಿಸಿದ್ದು, ಅದನ್ನು ಸರ್ಕಾರ ಸೋಮವಾರ ಸದನದಲ್ಲಿ ಮಂಡಸಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ನೀಡಿರುವ ತನಿಖಾ ವರದಿಯ ಸಂಪೂರ್ಣ ವಿವರನ್ನು ಸದನಕ್ಕೆ ನೀಡಿ, ಬಳಿಕ ಪ್ರಕರಣವನ್ನು ಸಿಬಿಐಗೆ ಸಿಫಾರಸು ಮಾಡಲಿದ್ದಾರೆ ಎಂದು ಅಧಿಕಾರಿಯೊಬ್ಬರು ಐಎಎನ್‌ಎಸ್ ಸುದ್ದಿ ಸಂಸ್ಥೆಗೆ ಭಾನುವಾರ ತಿಳಿಸಿದ್ದಾರೆ.
ಮಾರ್ಚ್ 16ರಂದು ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ 36 ವರ್ಷದ ಐಎಎಸ್ ಅಧಿಕಾರಿಯ ಪ್ರಕರಣವನ್ನು ಸರ್ಕಾರ ಮಾರ್ಚ್ 17ರಂದು ಸಿಐಡಿ ತನಿಖೆಗೆ ಆದೇಶಿಸಿತ್ತು. ಆದರೆ ತನಿಖೆಗೂ ಮುನ್ನವೆ ಪೊಲೀಸರು 'ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ' ಎಂದು ಹೇಳಿದ್ದರು.
ಈ ಮಧ್ಯೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ರಾಜ್ಯ ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದ್ದರಿಂದ ಪ್ರತಿಪಕ್ಷಗಳ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಸಾರ್ವಜನಿಕರ ಹಾಗೂ ಪ್ರತಿಪಕ್ಷಗ ಪ್ರತಿಭಟನೆಗೆ ಮಣಿದ ಸರ್ಕಾರ ಕಡೆಗೂ ಪ್ರಕರಣವನ್ನು ಸಿಬಿಐಗೆ ವಹಿಸಲು ಮುಂದಾಗಿದೆ.
ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, ಸರ್ಕಾರ ಯಾವುದೇ ಕಾರಣಕ್ಕೂ ಸಿಐಡಿ ವರದಿಯನ್ನು ಸದನದಲ್ಲಿ ಮಂಡಿಸಬಾರದು ಮತ್ತು ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.