ಪ್ರಧಾನ ಸುದ್ದಿ

ಯೋಗ, ಸೂರ್ಯನಮಸ್ಕಾರ ಇಸ್ಲಾಂ ವಿರೋಧಿ ಎಂದ ಮುಸ್ಲಿಂ ವೈಯಕ್ತಿಕ ಕಾನೂನು ಸಮಿತಿ

Guruprasad Narayana

ಜೈಪುರ: ಶಾಲೆಗಳಲ್ಲಿ ಯೋಗ ಮತ್ತು ಸೂರ್ಯನಮಸ್ಕಾರವನ್ನು ಕಡ್ಡಾಯ ಮಾಡುತ್ತಿರುವ ರಾಜಸ್ಥಾನ ಸರ್ಕಾರದ ನಡೆಯನ್ನು ತೀವ್ರವಾಗಿ ವಿರೋಧಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಪೀಠ, ಆದೇಶವನ್ನು ಕೂಡಲೆ ಹಿಂತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಆಗ್ರಹಿಸಿದೆ.

"ಇದು ಇಸ್ಲಾಂ ವಿರೋಧಿ ಮತ್ತು ಸರ್ಕಾರ ತನ್ನ ನಿರ್ಧಾರವನ್ನು ಕೂಡಲೆ ಹಿಂದೆಗೆದುಕೊಳ್ಳಬೇಕು. ಇಸ್ಲಾಂ ಈ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಇವುಗಳನ್ನು ಮುಸ್ಲಿಮರ ಮೇಲೆ ಹೇರುವುದು ತಪ್ಪು" ಎಂದು ಸಮಿತಿಯ ಸಹ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಮ್ ಖುರೇಶಿ, ಸಮಿತಿಯ ೨೪ನೆ ಸಭೆಯ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

"ದೇಶದ ಶಾಂತಿ ಮತ್ತು ಅಭಿವೃದ್ಧಿಗೆ ಆಂತರಿಕ ಭದ್ರತೆ ಮುಖ್ಯ, ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಧಾರ್ಮಿಕ ಸ್ವಾತಂತ್ರ್ಯವನ್ನು ಹಾಳುಗೆಡುವ ನಿರ್ಧಾರಗಳ ಬದಲು ಆ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು" ಎಂದು ಅವರು ತಿಳಿಸಿದ್ದಾರೆ.

"ಧಾರ್ಮಿಕ ಗ್ರಂಥದ" ಅಧ್ಯಾಯಗಳನ್ನು ಶಾಲಾ ಪಠ್ಯದಲ್ಲಿ ಸೇರಿಸುವುದನ್ನು ಕೂಡ ಖುರೇಶಿ ವಿರೋಧಿಸಿದ್ದಾರೆ.

"ಅಲ್ಪಸಂಖ್ಯಾತರು ಯಾವುದೇ ತೊಂದರೆ ಇಲ್ಲದೆ ತಮ್ಮ ಧರ್ಮವನ್ನು ಆಚರಿಸಲು ಅನುವಾಗುವಂತೆ ಅವರ ಮನದಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸುವ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು ಆದರೆ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಮೇಲೆ ಹಿಂದುತ್ವ ಸಂಘಟನೆಗಳು ಅಲ್ಪಸಂಖ್ಯಾತರ ವಿರುದ್ಧ ತಮ್ಮ ಕಾರ್ಯಸೂಚಿಯನ್ನು ಹೇರುತ್ತಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಹೈದರಾಬಾದ್ ಲೋಕಸಭಾ ಸದಸ್ಯ ಅಕ್ಬರುದ್ದೀನ್ ಒವಾಸಿ ಅವರ ದ್ವೇಶಪೂರಿತ ಭಾಷಣದ ಬಗ್ಗೆ ಪ್ರಶ್ನಿಸಿದಾಗ "ಅವರ ಭಾಷಣಗಳಲ್ಲಿ ಪ್ರಚೋದನೆ ನೀಡುವಂತದ್ದು ನನಗೇನು ಕಾಣಿಸಲಿಲ್ಲ" ಎಂದಿದ್ದಾರೆ.

SCROLL FOR NEXT