ಚೆನ್ನೈ: ತಮಿಳುನಾಡು ಕಾಂಗ್ರೆಸ್ ಘಟಕ ತಮ್ಮದೇ ಪಕ್ಷ ಆಡಳಿತ ನಡೆಸುತ್ತಿರುವ ಕರ್ನಾಟಕ ಸರ್ಕಾರದ ಮೇಕೆದಾಟು ಆಣೆಕಟ್ಟು ಯೋಜನೆಯನ್ನು ವಿರೋಧಿಸಿ, ಕೇಂದ್ರದ ಅನುಮತಿ ಇಲ್ಲದೆ ಏಕಪಕ್ಷೀಯವಾಗಿ ಮುಂದುವರೆದಿದೆ ಎಂದು ದೂರಿದೆ.
ಕಾವೇರಿ ನಿರ್ವಹಣಾ ಸಮಿತಿಗೆ ಕೇಂದ್ರ ಸರ್ಕಾರ ಸೂಚನೆ ನೀಡುವ ಮೊದಲೇ, ಅಣೆಕಟ್ಟು ನಿರ್ಮಿಸಲು ಕರ್ನಾಟಕ ಮುಂದಾಗಿರುವುದು ಯಾರೂ ಒಪ್ಪುವಂತಿಲ್ಲ ಎಂದು ತಮಿಳು ನಾಡು ಕಾಂಗ್ರೆಸ್ ಅಧ್ಯಕ್ಷ ಇ ವಿ ಕೆ ಎಸ್ ಎಲಂಗೋವನ್ ತಿಳಿಸಿದ್ದಾರೆ. "ಕೇಂದ್ರ ಪರಿಸರ ಇಲಾಖೆಯ ಅನುಮತಿ ಇಲ್ಲದೆ ತೆಗೆದುಕೊಂಡಿರುವ ಈ ಏಕಪಕ್ಷ ನಿರ್ಧಾರ ಖಂಡನೀಯ" ಎಂದಿದ್ದಾರೆ ಅವರು.
ಅಂತರ ರಾಜ್ಯ ನದಿ ವಿವಾದದಲ್ಲಿ ತಮ್ಮ ಪಕ್ಷ ಇಬ್ಬದಿ ನೀತಿಯನ್ನು ಅನುಸರಿಸುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು ಬೇರೆಲ್ಲಾ ರಾಜಕೀಯ ಪಕ್ಷಗಳಂತೆ ನಮ್ಮ ಪಕ್ಷವೂ ರಾಜ್ಯದ ಏಳಿಗೆಗೆ ಬದ್ಧವಾಗಿದೆ ಎಂದಿದ್ದಾರೆ. ಈ ಅಣೆಕಟ್ಟಿನ ವಿರುದ್ಧ ಕರ್ನಾಟಕ ಹಾಗು ಕೇಂದ್ರ ಸರ್ಕಾರದ ವಿರುದ್ಧ ಮಾರ್ಚ್ ೨೮ರಂದು ಕರೆದಿರುವ ಬಂಧ್ ಗೆ ಪಕ್ಷದ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ.