ನವದೆಹಲಿ: ದೆಹಲಿಯಲ್ಲಿ ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳು ಕಳೆಯುವ ಮೊದಲೇ ಆಮ್ ಆದ್ಮಿ ಪಕ್ಷದಲ್ಲಿ ಒಡಕು ಮೂಡಿ ಇಬ್ಭಾಗವಾಗುವ ಸೂಚನೆ ತೋರಿದೆ. ಗುರುವಾರ ಪಕ್ಷದ ವಕ್ತಾರರು, ಹಿರಿಯ ನಾಯಕರಾದ ಯೋಗೆಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ ಎಂದಿದ್ದಾರೆ, ಆದರೆ ಈ ಇಬ್ಬರೂ ನಾಯಕರು ಅದನ್ನು ಅಲ್ಲಗೆಳೆದಿದ್ದಾರೆ.
ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೂ ಮುಂಚೆ ಈ ಘೋಷಣೆ ಮಾಡಿರುವ ಆಪ್ ಪಕ್ಷದ ವಕ್ತಾರ ಆಶಿಶ್ ಕೇತನ್, ಭೂಷಣ್ ಮತ್ತು ಯಾದವ್ ಅವರು ದೆಹಲಿ ಮುಖ್ಯಮಂತ್ರಿ ಹಾಗೂ ಪಕ್ಷದ ಜನಪ್ರಿಯ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ತಮ್ಮ ನಿಲುವನ್ನು ಸಡಿಲಗೊಳಿಸುತ್ತಿಲ್ಲ ಎಂದು ದೂರಿದ್ದಾರೆ.
"ಅವರು ಖಾಸಗಿಯಾಗಿ ಒಂದು ಹೇಳುತ್ತಾರೆ ಮತ್ತು ಸಾರ್ವಜನಿಕವಾಗಿ ಇನ್ನೊಂದನ್ನು ಹೇಳುತ್ತಾರೆ" ಎಂದು ಕೇತನ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಈ ಯುವ ಪಕ್ಷದ ವಿವಾದಗಳನ್ನು ಬಗೆಹರಿಸಿಕೊಳ್ಳಲು ಯಾದವ್ ಮತ್ತು ಭೂಷಣ್ ಅವರ ಜೊತೆಗಿನ ಸಭೆಯಲ್ಲಿ ಇವರು ಕೂಡ ಭಾಗಿಯಾಗಿದ್ದರು.
ನಾವು ಅವರ ಬೇರೆಲ್ಲಾ ಬೇಡಿಕೆಗಳಿಗೆ ಮನ್ನಣೆ ನೀಡಿದ್ದರೂ ಅವರು ಕೇಜ್ರಿವಾಲ್ ಅವರನ್ನು ರಾಷ್ಟ್ರೀಯ ಸಂಚಾಲಕ ಹುದ್ದೆಯಿಂದ ತೆಗೆದು ಹಾಕಬೇಕು ಎಂಬ ತಮ್ಮ ಬೇಡಿಕೆಯನ್ನು ಸಡಿಲಿಸುತ್ತಿಲ್ಲ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಧಿಯಾ ದೂರಿದ್ದಾರೆ.
"ಕೇಜ್ರಿವಾಲ್ ಅವರನ್ನು ವಜಾ ಮಾಡುವ ಯಾವ ಪ್ರಕ್ರಿಯೆಯನ್ನು ನಾನು ಒಪ್ಪುವುದಿಲ್ಲ" ಎಂದಿದ್ದಾರೆ ಅವರು.
ಈ ಹೇಳಿಕೆಗಳನ್ನು ಅಲ್ಲಗೆಳೆದಿರುವ ಭೂಷನ್ ಮತ್ತು ಯಾದವ್, ನಾವು ಕೇಜ್ರಿವಾಲ್ ಅವರನ್ನು ವಜಾ ಮಾಡುವ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದಿದ್ದಾರೆ. ಕೇಜ್ರಿವಾಲ್ ತಮ್ಮ ಸುತ್ತ ತಲೆ ಅಲ್ಲಾಡಿಸುವವರನ್ನೇ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ, ಸ್ವತಂತ್ರ ನಿಲುವುಗಳುಳ್ಳವರು ಅವರಿಗೆ ಬೇಡವಾಗಿದ್ದಾರೆ ಎಂದಿದ್ದಾರೆ ಭೂಷಣ್.
"ಕೇಜ್ರಿವಾಲ್ ಅವರನ್ನು ಪಕ್ಷದ ಸಂಚಾಲಕನಾಗಿ ವಜಾ ಮಾಡಬೇಕೆಂದು ನಾವು ಬೇಡಿಕೆಯಿಟ್ಟೆವು ಎಂಬುದು ಶುದ್ಧ ಸುಳ್ಳು" ಎಂದಿರುವ ಅವರು ನಾವು ಕೇಳಿದ್ದು ಪಕ್ಷದಲ್ಲಿ ಹೆಚ್ಚಬೇಕಾದ ಪಾರದರ್ಶಕತೆಯನ್ನಷ್ಟೆ ಎಂದಿದ್ದಾರೆ.
ಈಗ ತಾರಕಕ್ಕೇರಿರಿವ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಕ್ಕೆ ಯಾವುದೇ ಉಪಶಮನವಿದ್ದಂತೆ ಕಾಣುತ್ತಿಲ್ಲ ಆದುದರಿಂದ ಇಬ್ಭಾಗ ಅಭಾಧಿತ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.